ಆರ್ಆರ್ ಫೀಲ್ಡಿಂಗ್ ಕೋಚ್ಗೆ ಕೊರೊನಾ ಸೋಂಕು

ಜೈಪುರ್: ಭಾರತದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಷ್ಟಿತ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯುಎಇಗೆ ಸ್ಥಳಾಂತರ ಮಾಡಿತ್ತು. ಆದರೆ ಈಗ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದ ಎನ್ನುವಷ್ಟರಲ್ಲಿ ರಾಜಸ್ತಾನ್ ರಾಯಲ್ಸ್ನ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಮುಂಬೈನಲ್ಲಿ ಯುಎಇಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಒಟ್ಟು ಸೇರುವುದಕ್ಕೂ ಮುನ್ನ ಸುರಕ್ಷತಾ ದೃಷ್ಠಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ದಿಶಾಂತ್ ಯಾಗ್ನಿಕ್ ಕೊರೊನಾ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬಿಸಿಸಿಐ ನಿಯಮದ ಪ್ರಕಾರ ಯುಎಇಗೆ ಪ್ರಯಾಣಿಸುವುದಕ್ಕೂ ಮುನ್ನ ಎರಡು ಕೋವಿಡ್ ಪರೀಕ್ಷೆಗಳನ್ನು 24 ಗಂಟೆಗಳ ಅಂತರದಲ್ಲಿ ನಡೆಸಬೇಕಿದೆ. ಆದರೆ ಫ್ರಾಂಚೈಸಿಗಳು ಈ ಬಗ್ಗೆ ಮತ್ತಷ್ಟು ಮುಂಜಾಗ್ರತೆಯನ್ನು ಕೈಗೊಂಡಿದ್ದು ಇದಕ್ಕೂ ಮುನ್ನವೇ ಪರೀಕ್ಷೆಯನ್ನು ನಡೆಸಿತ್ತು. ದಿಶಾಂತ್ ಸದ್ಯ ತಮ್ಮ ಉದಯಪುರದ ನಿವಾಸದಲ್ಲಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿದೆ. 14 ದಿನಗಳ ಕ್ವಾರಂಟೈನ್ಗಾಗಿ ಪೂರೈಸಿ ಬಳಿಕ ನೆಗೆಟಿವ್ ವರದಿಯೊಂದಿಗೆ ತಂಡವನ್ನು ಸೇರಿಕೊಳ್ಳುವ ಅವಕಾಶವಿದೆ. ಇದೇ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ದಿಶಾಂತ್ ತಮ್ಮ ಊರಿನಲ್ಲೇ ಈ ಸಂದರ್ಭದಲ್ಲಿ ಇದ್ದು, ತಂಡದ ಯಾವುದೇ ಇತರ ಆಟಗಾರರು ದಿಶಾಂತ್ ಜೊತೆಗೆ ಸಾಮಿಪ್ಯವನ್ನು ಕಾಯ್ದುಕೊಂಡಿರಲಿಲ್ಲ ಎಂದು ಖಚಿತಪಡಿಸಿದೆ.