ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗೆ ಬೈಕ್ ಡಿಕ್ಕಿ! `ಕೊಲೆ ಯತ್ನ’ವೆಂದು ಯುವಕನ ಮೇಲೆ ಹಲ್ಲೆ!!

ಮಂಗಳೂರು: ಕಳೆದ 2014ರಲ್ಲಿ ಬಿ.ಸಿ.ರೋಡ್ ನಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿ ಸಜಿಪ ನಿವಾಸಿ ಶರೀಫ್ ಎಂಬಾತ ಸಂಚರಿಸುತ್ತಿದ್ದ ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಘಟನೆ ಸ್ಥಳೀಯವಾಗಿ ಕೊಲೆಯತ್ನದ ತಿರುವು ಪಡೆದು ತಂಡವೊಂದು ಯುವಕನೊಬ್ಬನ ಮೇಲೆ ದಾಳಿ ನಡೆಸಿ ಹಲ್ಲೆಗೈದ ಘಟನೆ ಇಂದು ಮಧ್ಯಾಹ್ನ ಬಂಟ್ವಾಳ ಸಮೀಪದ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ನಡೆದಿದೆ. ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರ ನಿವಾಸಿಯಾದ ಶರೀಫ್ ಮಸೀದಿಗೆ ತೆರಳಲೆಂದು ಮನೆಯಿಂದ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಶರೀಫ್ ಕೆಳಕ್ಕೆ ಬಿದ್ದಿದ್ದು ಶರೀಫ್ ಮತ್ತು ಬೈಕ್ ಸವಾರರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಬೈಕ್ ಸವಾರರು ಅಲ್ಲಿಂದ ತೆರಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಇದೇ ಪ್ರಕರಣ ಶರೀಫ್ ಮೇಲೆ ತಂಡವೊಂದು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ಸ್ಥಳೀಯವಾಗಿ ಪ್ರಚಾರವಾಗಿದ್ದು ತಿರುವು ಪಡೆದುಕೊಂಡಿದೆ. ಸಂಬಂಧಿಯೊಬ್ಬರ ಮರಣದ ಹಿನ್ನೆಲೆಯಲ್ಲಿ ಅಲ್ಲೇ ಓಡಾಡುತ್ತಿದ್ದ ಆಲಾಡಿ ನಿವಾಸಿ ನವೀನ್ ಎಂಬಾತನನ್ನು ತಂಡವೊಂದು ತಡೆದು ಹಲ್ಲೆ ನಡೆಸಿದೆ. ನವೀನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳರ ಮೇಲೆ 2017ರ ಜುಲೈ 4ರಂದು ಲಾಂಡ್ರಿ ಒಳಗೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಜುಲೈ 7ರಂದು ಶರತ್ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಶರೀಫ್ ಆರೋಪಿಯಾಗಿದ್ದಾನೆ. ಶರತ್ ಮಡಿವಾಳ ಹತ್ಯೆಯ ಬಳಿಕ ಬಂಟ್ವಾಳ, ಬಿ.ಸಿ.ರೋಡ್ ಪರಿಸರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದನ್ನು ಸ್ಮರಿಸಬಹುದಾಗಿದೆ.
