ಅವಳಿ ಬಾಂಬ್ ಸ್ಫೋಟಕ್ಕೆ 14 ಮಂದಿ ಬಲಿ

ಮನಿಲಾ: ದಕ್ಷಿಣ ಫಿಲಿಪೈನ್ಸ್ ನ ಜೊಲೊ ಪಟ್ಟಣದಲ್ಲಿ ಸಂಭವಿಸಿದ ಎರಡು ಪ್ರಬಲ ಬಾಂಬ್ ಸ್ಫೋಟದಲ್ಲಿ 14 ಮಂದಿ ಬಲಿಯಾಗಿದ್ದಾರೆ. ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ನಡೆದಿರುವುದು ಸ್ಪಷ್ಟವಾಗಿದೆ. ಮಧ್ಯಾಹ್ನ ಸುಲು ಎಂಬಲ್ಲಿ ಸ್ಫೋಟ ಸಂಭವಿಸಿತು ಎಂದು ರೆಡ್ ಕ್ರಾಸ್ ಮುಖ್ಯಸ್ಥ, ಸೆನೆಟರ್ ರಿಚರ್ಡ್ ಗೊರ್ಡನ್ ಹೇಳಿದ್ದಾರೆ. ಅತ್ಯಾಧುನಿಕ ಸ್ಫೋಟಕ ಸಾಧನಗಳನ್ನು ಹೊಂದಿದ್ದ ಮೋಟರ್ ಸೈಕಲ್ ಸ್ಫೋಟಗೊಳಿಸಲಾಗಿದೆ. ಮೊದಲ ಸ್ಫೋಟದಲ್ಲಿ ಐವರು ಯೋಧರು ಹಾಗೂ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಸಾಂದರ್ಭಿಕ ಚಿತ್ರ ಎರಡನೇ ಸ್ಫೋಟವು ಮಹಿಳಾ ಆತ್ಮಾಹುತಿ ಬಾಂಬರ್ ಮೂಲಕ ಸಂಭವಿಸಿದ್ದು, ಓರ್ವ ನಾಗರಿಕ ಮೃತಪಟ್ಟಿದ್ದಾರೆ ಎಂದು ಮೇಜರ್ ಜನರಲ್ ಕೊರ್ಲೆಟೋ ವಿಲುಯಾನ್ ಹೇಳಿದ್ದಾರೆ. ಎರಡು ಸ್ಫೋಟಗಳಿಂದ ಸುಮಾರು 24 ಮಂದಿ ಗಾಯಗೊಂಡಿದ್ದಾರೆ. 2019ರಲ್ಲಿ 20 ಜನರನ್ನು ಬಲಿ ಪಡೆದಿದ್ದ ಕ್ಯಾಥೋಲಿಕ್ ಚರ್ಚ್ ಸ್ಫೋಟ ಸಂಭವಿಸಿದ ಸ್ಥಳದ ಬಳಿಯಲ್ಲೇ ಇಂದು ಸ್ಫೋಟ ಸಂಭವಿಸಿದೆ. ಸುಲು ಪ್ರಾಂತ್ಯದಲ್ಲಿ ಐಎಸ್‍ಐಎಸ್ ಬೆಂಬಲಿತ ಸಶಸ್ತ್ರ ಅಬು ಸಯ್ಯಾಫ್ ಗುಂಪು ಸಕ್ರಿಯವಾಗಿದೆ. ಆದರೆ, ಈ ಸ್ಫೋಟದ ಹೊಣೆಯನ್ನು ಯಾವ ಗುಂಪು ಹೊತ್ತುಕೊಂಡಿಲ್ಲ. ಘಟನೆ ಬಗ್ಗೆ ತನಿಖೆ ಆರಂಭಗೊಂಡಿದೆ ಎಂದು ಫಿಲಿಪೈನ್ ಪೊಲೀಸ್ ಮುಖ್ಯಸ್ಥ ಜನರಲ್ ಆರ್ಚಿ ಫ್ರಾನ್ಸಿಸ್ಕೋ ಗಾಮ್ಬೋವಾ ಹೇಳಿದ್ದಾರೆ.