ಅಯೋಧ್ಯೆ ರಾಮಮಂದಿರ ಭೂಮಿಪೂಜೆಗೆ ಅಡ್ವಾಣಿಗೆ ಯಾಕಿಲ್ಲ ಆಹ್ವಾನ!?

ಲಖ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿಪೂಜೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಪೂಜೆ ನೆರವೇರಿಸಲಿದ್ದಾರೆ. ಆದರೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿಲ್ಲ. ಉಮಾ ಭಾರತಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಹಲವರಿಗೆ ಭೂಮಿ ಪೂಜೆಗೆ ಆಹ್ವಾನ ನೀಡಿದ್ದರೂ 92 ವರ್ಷದ ಅಡ್ವಾಣಿ ಹಾಗೂ 86 ವರ್ಷದ ಮುರಳಿ ಮನೋಹರ್ ಜೋಶಿಗೆ ಅವರಿಗೆ ಆಹ್ವಾನ ನೀಡಲಾಗಿಲ್ಲ.
ಕೊರೊನಾ ವೈರಸ್ ಭೀತಿ ಮತ್ತು ಆರೋಗ್ಯ ಸರಿಯಿಲ್ಲದ ಕಾರಣ ಇವರಿಬ್ಬರೂ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಹೇಳಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡುವ ಸಾಧ್ಯತೆ ಇದೆ. ಮೋದಿ ಅವರ ಜೊತೆ ಕೇವಲ ನಾಲ್ಕು ನಾಯಕರು ಮಾತ್ರ ಕುಳಿತುಕೊಳ್ಳಲಿದ್ದಾರೆ. ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಗೋಪಾಲ್ ದಾಸ್ ಹಾಗೂ ಇತರೆ ಇಬ್ಬರು ಗಣ್ಯರು ಮಾತ್ರ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.