`ಅಮಿತ್ ಶಾ ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇಕೆ?’

ನವದೆಹಲಿ: ಕೊರೊನಾ ಸೋಂಕಿಗೆ ಒಳಗಾಗಿರುವ ಗೃಹಸಚಿವ ಅಮಿತ್ ಶಾ ಅವರು ಸರಕಾರಿ ಆಸ್ಪತ್ರೆಯ ಬದಲು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪ್ರಶ್ನೆ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, `ಗೃಹ ಸಚಿವರು ಅನಾರೋಗ್ಯ ಕಾಡಿದಾಗ ಏಮ್ಸ್‍ಗೆ ತೆರಳದೆ ನೆರೆಯ ರಾಜ್ಯದ ಖಾಸಗಿ ಆಸ್ಪತ್ರೆಯನ್ನು ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದು ಆಶ್ಚರ್ಯದ ವಿಚಾರವಾಗಿದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ಜನತೆಯ ಆತ್ಮವಿಶ್ವಾಸವನ್ನು ಪ್ರೇರೇಪಿಸಲು ಪ್ರಭಾವಿಗಳ ಪ್ರೋತ್ಸಾಹ, ರಕ್ಷಣೆ ಅಗತ್ಯವಿದೆ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಸೋಂಕು ಪತ್ತೆಯಾದ ಬಳಿಕ 55ರ ವಯಸ್ಸಿನ ಶಾ ಚಿಕಿತ್ಸೆಗಾಗಿ ಹರ್ಯಾಣದ ಗುರುಗಾಂವ್‍ನಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯ ಏಮ್ಸ್‍ನ್ನು 1956ರಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಸ್ಥಾಪಿಸಿದ್ದರು. ಜನರಿಗೆ ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ ಎನ್ನುವ ಬಿಜೆಪಿ ನಾಯಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.