ಅಬ್ಬರಿಸಿದ ಮನ್ರೊ-ಪೊಲಾರ್ಡ್‌ ಟ್ರಿನ್‌ಬ್ಯಾಗೊಗೆ ಸುಲಭ ಗೆಲುವು

ತರೌಬಾ: ಕಾಲಿನ್‌ ಮನ್ರೊ ಹಾಗೂ ಡ್ವೇಯ್ನ್‌ ದಾಖಲಿಸಿದ ಆಕರ್ಷಕ ಅರ್ಧಶತಕ ಅಲ್ಲದೆ ಅಂತಿಮ ಹಂತದಲ್ಲಿ ಕೀರನ್‌ ಪೊಲಾರ್ಡ್‌ ಪ್ರದರ್ಶಿಸಿದ ಸ್ಫೋಟಕ ಇನ್ನಿಂಗ್ಸ್‌ ನೆರವಿನಿಂದ ಇಲ್ಲಿ ನಡೆಯುತ್ತಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ನ ಬಾರ್ಬೆಡೊಸ್‌ ಟ್ರೈಡೆಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಟ್ರಿನ್‌ಬ್ಯಾಗೊ ನೈಟ್‌ರೈಡರ್ಸ್‌ ೧೯ ರನ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಟ್ರಿನ್‌ಬ್ಯಾಗೊಗೆ ಉತ್ತಮ ಆರಂಭಿಕ ನೀಡುವಲ್ಲಿ ಸುನಿಲ್‌ ನಾರೈನ್‌ (೮) ಹಾಗೂ ಲೆಂಡಿಲ್‌ ಸಿಮೊನ್ಸ್‌ (೨೧) ವಿಫಲರಾಗಿದ್ದು, ನಿಧಾನಗತಿಯ ಬ್ಯಾಟಿಂಗ್‌ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮನ್ರೊ (೫೦) ಹಾಗೂ ಡ್ವೇಯ್ನ್‌ ಬ್ರಾವೊ (೫೪) ವೇಗದ ಅರ್ಧಶತಕ ನಡೆಸಿ, ಚೇತರಿಕೆ ನೀಡಿದರು. ಆದರೆ ಅಂತಿಮ ಹಂತದಲ್ಲಿ ಪೊಲಾರ್ಡ್‌ ಕೇವಲ ೧೭ ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ ನೆರವಿನಿಂದ ಅಜೇಯ ೪೧ ರನ್‌ ದಾಖಲಿ, ಮೊತ್ತ ೧೮೦ರ ಗಡಿ ದಾಟುವಲ್ಲಿ ನೆರವಾಯಿತು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ ೧೮೫ ರನ್‌ ಗಳಿಸಿತು. ಬಾರ್ಬೆಡೊಸ್‌ ಪರ ಆಶ್ಲೆ ನರ್ಸ್‌ ಒಂದು ವಿಕೆಟ್‌ ಪಡೆದರು.
ಇನ್ನು ಗುರಿ ಬೆನ್ನತ್ತಿದ ಬಾರ್ಬೆಡೊಸ್‌ಗೆ ಜೊನಾಥನ್‌ ಚಾರ್ಲ್ಸ್‌ (೫೨) ಹಾಗೂ ಶಾಯ್‌ ಹೋಪ್‌ (೩೬) ಸ್ಫೋಟಕ ಆರಂಭವನ್ನೇ ನೀಡಿದರು. ಈ ಜೋಡಿ ಮೊದಲ ಎಂಟು ಓವರ್‌ಗಳಲ್ಲಿ ೬೮ ರನ್‌ಗಳ ಜೊತೆಯಾಟ ನಡೆಸುವ ಮೂಲಕ ಎದುರಾಳಿ ಬೌಲರ್ಸ್‌ಗಳ ಮೇಲೆ ಒತ್ತಡ ಹಾಕುವಲ್ಲಿ ಸಫಲರಾದರು. ಆದರೆ ನಂತರ ಬಂದ ಕೋರಿ ಆಂಡರ್ಸನ್‌ (೨), ಮೇಯರ್ಸ್‌ (೧) ಹಾಗೂ ಕಾರ್ಟರ್‌ (೮) ವಿಫಲತೆ ತಂಡಕ್ಕೆ ಆಘಾತ ತಂದಿತು. ಆದರೆ ಜೇಸನ್‌ ಹೋಲ್ಡರ್‌ (ಅಜೇಯ ೩೪) ಹಾಗೂ ಆಶ್ಲೆ ನರ್ಸ್‌ (೨೧) ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ ೧೬೬ ರನ್‌ ಗಳಿಸಲಷ್ಟೇ ಶಕ್ತವಾಯಿತು. ಟ್ರಿನ್‌ಬಾಗೊ ಪರ ಸುನಿಲ್‌ ನಾರೈನ್‌ ಒಂದು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *