ಅಗ್ನಿಪರೀಕ್ಷೆಯಲ್ಲಿ ಪಾಸಾದ ಕ್ರಿಸ್‌ ಗೇಲ್‌!

ಮೊಹಾಲಿ: ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದ ಕ್ರಿಸ್ ಗೇಲ್ ವಿಶ್ವ ದಾಖಲೆಯ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಉಸೇನ್ ಬೋಲ್ಟ್ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಾಗ ಕ್ರಿಸ್ ಗೇಲ್ ಬಗ್ಗೆಯೂ ಚರ್ಚೆಗಳು ನಡೆದಿತ್ತು. ಆದರೆ ಕ್ರಿಸ್ ಗೇಲ್ ತಮ್ಮ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರು ಅಗ್ನಿಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಅತಿಶಯೋಕ್ತಿಯಾಗಲಾರದು. ಯಾಕೆಂದರೆ ಪಾರ್ಟಿ ವೇಳೆ ಗೇಲ್‌ ಹಲವು ಸೆಲೆಬ್ರಿಟಿಗಳ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಹೀಗಾಗಿ ನೆಗೆಟಿವ್‌ ವರದಿ ಬಂದಿರುವುದು ಗೇಲ್‌ ಜೊತೆಗೆ ಇತರೆ ಸೆಲೆಬ್ರಿಟಿಗಳು ಕೂಡ ನಿರಾಳತೆ ಕಂಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಕೊರೊನಾ ಪರೀಕ್ಷೆಯ ವರದಿಯ ಬಗ್ಗೆ ಕ್ರಿಸ್ ಗೇಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎರಡು ಪರೀಕ್ಷೆಯನ್ನು ನಡೆಸಲಾಗಿದ್ದು ಎರಡು ಕೊವಿಡ್ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿರುವುದನ್ನು ಗೇಲ್ ಖಚಿತಪಡಿಸಿದ್ದಾರೆ. ಕ್ರಿಸ್ ಗೇಲ್ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಯುಎಇಗೆ ತೆರಳುವ ಮುನ್ನ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆವಿಟ್ ವರದಿಯನ್ನು ಪಡೆದುಕೊಳ್ಳಬೇಕಿದೆ. ಹೀಗಾಗಿ ಎರಡು ಪರೀಕ್ಷೆಗೆ ಗೇಲ್ ಒಳಪಟ್ಟಿದ್ದು ಎರಡಲ್ಲೂ ಋಣಾತ್ಮಕ ವರದಿ ಪಡೆದುಕೊಂಡಿದ್ದಾರೆ. ಹೀಗಾಗಿ ಐಪಿಎಲ್‌ಗೆ ಪ್ರಯಾಣಿಸಲು ಸಜ್ಜಾಗಿದ್ದೇನೆ ಎಂದು ಗೇಲ್ ತಿಳಿಸಿದ್ದಾರೆ. ಕಳೆದ ವಾರ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ ತಮ್ಮ 34ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಕೊರೊನಾ ವೈರಸ್‌ ಭೀತಿಯ ಮಧ್ಯೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಗೇಲ್ ಬಗ್ಗೆಯೂ ಚರ್ಚೆಗಳು ಆರಂಭವಾಗಿತ್ತು. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ ಕ್ರಿಸ್ ಗೇಲ್. ಹೀಗಾಗಿ ಗೇಲ್ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮತ್ತೊಂದೆಡೆ ಕೌಟುಂಬಿಕ ಕಾರಣದಿಂದಾಗಿ ತವರು ಟಿ20 ಲೀಗ್‌ ಟೂರ್ನಿಯಾದ ಸಿಪಿಎಲ್‌ನಿಂದ ಈ ಬಾರಿ ದೂರ ಉಳಿದಿದ್ದಾರೆ.

Leave a Reply

Your email address will not be published. Required fields are marked *