3.5 ಲಕ್ಷ ರೂ. ಖರ್ಚು ಮಾಡಿ ಚಿನ್ನದ ಮಾಸ್ಕ್ ಧರಿಸಿದ ವ್ಯಕ್ತಿ!

ಭುವನೇಶ್ವರ: ಕೊರೊನಾದಿಂದ ಪಾರಾಗಲು ಮಾಸ್ಕ್ ಧರಿಸಿ ಎಂದು ಸರಕಾರ ಸಲಹೆ ನೀಡಿದೆ. ಬಟ್ಟೆಯ ಮಾಸ್ಕ್ ಧರಿಸುವುದು ಸಾಮಾನ್ಯವಾಗಿದೆ. ಆದರೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 3.5 ಲಕ್ಷ ರೂ. ವೆಚ್ಚಮಾಡಿ ಚಿನ್ನದ ಮಾಸ್ಕ್ ಮಾಡಿಸಿ ಧರಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಮುಂಬೈನ ಝಾವೇರಿ ಬಜಾರ್ನಲ್ಲಿ ಈ ಮಾಸ್ಕ್ ಖರಿದೀಸಿದ್ದಾರೆ. ಅಂದಹಾಗೆ ಈ ವ್ಯಕ್ತಿಯ ಹೆಸರು ಅಲೋಕ್ ಮೊಹಂತಿ. ಪ್ರಸ್ತುತ, ಕಟಕ್ನ ಕೇಶರಪುರ ಪ್ರದೇಶದ ನಿವಾಸಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಲೋಕ್ ಮೊಹಂತಿ `ನಾನು ಇತ್ತೀಚೆಗೆ ಟಿವಿಯಲ್ಲಿ ಚಿನ್ನದ ಮುಖವಾಡ ಧರಿಸಿದ ಉದ್ಯಮಿಯೊಬ್ಬನನ್ನು ನೋಡಿದ್ದೆ. ನಾನು ಚಿನ್ನದ ಬಗ್ಗೆ ಒಲವು ಹೊಂದಿದ್ದರಿಂದ ಮುಂಬೈ ಮೂಲದ ವ್ಯಾಪಾರಿ ಮೂಲಕ ಆರ್ಡರ್ ಮಾಡಿಸಿದ್ದೆ. ಇದರಲ್ಲಿ 90ರಿಂದ 100 ಗ್ರಾಂ ಚಿನ್ನದ ಎಳೆಗಳನ್ನು ಬಳಸಲಾಗಿದೆ. ಮಾಸ್ಕ್ ಉಸಿರಾಡಲು ರಂಧ್ರಗಳನ್ನು ಹೊಂದಿದೆ ಮತ್ತು ಧರಿಸಲು ಅನುಕೂಲಕರವಾಗಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. 10 ದಿನಗಳ ಹಿಂದೆ ಪುಣೆಯ ಪಿಂಪ್ರಿ-ಚಿಂಚ್ವಾಡ್ ನಿವಾಸಿ ಶಂಕರ್ ಕುರಾಡೆ ಅವರು 3 ಲಕ್ಷ ರೂ. ವೆಚ್ಚದಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಹಾಕಿಕೊಂಡಿದ್ದರು.