14 ದಿನಗಳ ಕಾಲ ಉಡುಪಿ ಜಿಲ್ಲಾ ಗಡಿ ಬಂದ್!

ಮಲ್ಪೆ: ಗುರುವಾರದಿಂದ ಮುಂದಿನ 14 ದಿನಗಳ ಕಾಲ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲು ಇಂದು ಜಿಲ್ಲಾಧಿಕಾರಿ ಜಗದೀಶ್ ಕರೆದಿದ್ದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಬೆಂಗಳೂರಿನಲ್ಲಿ ನಡೆಸಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ನೀಡಿದ ಸೂಚನೆಯಂತೆ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗಡಿಗಳನ್ನು 14 ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಯಿತು ಎಂದು ಉಡುಪಿ ಶಾಸಕ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಗಡಿಭಾಗದಿಂದ ಹೊರಗೆ ಹೋಗುವವರಿಗೆ ಹಾಗೂ ಒಳಗೆ ಬರುವವರಿಗೆ ಬುಧವಾರ ರಾತ್ರಿ 8 ಗಂಟೆಯವರೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಆ ಬಳಿಕ ಜಿಲ್ಲೆಯ ಎಲ್ಲಾ ಗಡಿಗಳನ್ನು ಮುಚ್ಚಲಾಗುವುದು. ಗಡಿ ಸೀಲ್‍ಡೌನ್ ಸಂದರ್ಭ ತುರ್ತು ಸೇವೆಗಳಿಗೆ ಗಡಿಯಿಂದ ತೆರಳಲು ಹಾಗೂ ಆಗಮಿಸಲು ಅವಕಾಶ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬಸ್‍ಗಳ ಸಂಚಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *