ಹಳೆಯಂಗಡಿ: ತೋಕೂರು ಪರಿಸರದಲ್ಲಿ `ವಾಮಾಚಾರಿ’ಗಳ ಕಾರುಬಾರು!

ಹಳೆಯಂಗಡಿ: ಕೊರೊನಾ ಮಹಾಮಾರಿಯ ಆತಂಕ ಎಲ್ಲಾ ಕಡೆ ಹಬ್ಬುತ್ತಿದ್ದರೂ ಹಳೆಯಂಗಡಿ ಸಮೀಪದ ತೋಕೂರು ಪರಿಸರದಲ್ಲಿ ವಾಮಾಚಾರಿಗಳ ಕಾರುಬಾರು ಹೆಚ್ಚುತ್ತಿರುವ ದೂರು ಸಾರ್ವಜನಿಕರಿಂದ ಕೇಳಿಬರತೊಡಗಿದೆ. ತೋಕೂರು ಬಸ್ ನಿಲ್ದಾಣ, ಕೆರೆಕಾಡು ಕಡೆ ಹೋಗುವ ರಸ್ತೆ, ಟಿ.ಎ. ಬೋರ್ಡ್ ರಸ್ತೆಯಲ್ಲಿ ಲಿಂಬೆಕಾಯಿ, ಕುಂಕುಮ, ತೆಂಗಿನಕಾಯಿ ಬಳಸಿ ವಾಮಾಚಾರ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ಇಲ್ಲಿನ ರಸ್ತೆಯಲ್ಲಿ ಸಂಜೆ ಕತ್ತಲು ಕವಿಯುತ್ತಲೇ ತೆಂಗಿನಕಾಯಿ ಒಡೆಯುವುದು, ಲಿಂಬೆಕಾಯಿ ಕತ್ತರಿಸಿ ಕುಂಕುಮ ಎಸೆಯುವ ಕೃತ್ಯ ನಡೆಯುತ್ತದೆ. ಇದರಿಂದ ಪರಿಸರದ ನಿವಾಸಿಗಳು ಮಾತ್ರವಲ್ಲದೆ ವಾಹನ ಸವಾರರು ಕೂಡಾ ಭಯದಿಂದಲೇ ಸಂಚರಿಸುವಂತಾಗಿದೆ.
ತೋಕೂರು ಪರಿಸರದ ವ್ಯಕ್ತಿಗಳೇ ಇದರಲ್ಲಿ ತೊಡಗಿಕೊಂಡಿರುವ ಬಗ್ಗೆ ಸ್ಥಳೀಯರಲ್ಲಿ ಸಂಶಯವಿದೆ. ರಿಕ್ಷಾವೊಂದು ಆಗಿಂದಾಗ್ಗೆ ಇಲ್ಲಿನ ನಿರ್ಜನ ಪ್ರದೇಶಲ್ಲಿ ಸಂಜೆಯ ವೇಳೆ ಬಂದು ನಿಲ್ಲುವುದನ್ನು ಸ್ಥಳೀಯರು ಗಮನಿಸಿದ್ದು ಮೂಲ್ಕಿ ಪೊಲೀಸರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿಬರತೊಡಗಿವೆ. ಸಂಜೆ ಏಳು ಗಂಟೆಯಿಂದ 9 ಗಂಟೆಯೊಳಗೆ ಕೆಲಸ ಮಾಡಿ ಮುಗಿಸುವ ವಾಮಾಚಾರಿಗಳಿಂದಾಗಿ ಗ್ರಾಮಸ್ಥರು ನೆಮ್ಮದಿ ಕಳೆದುಕೊಂಡಿದ್ದಾರೆ. ಮೂಲ್ಕಿ ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ಚುರುಕುಗೊಳಿಸುವ ಮೂಲಕ ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.