ಸೈಕಲ್ ಸವಾರಗೆ ಡಿಕ್ಕಿ: ಕ್ರಿಕೆಟಿಗ ಕುಸಲ್ ಸೆರೆ

ಕೊಲಂಬೊ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್‍ನನ್ನು ಶ್ರೀಲಂಕಾ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಹಿಂದೆ 2003ರಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಕೌಶಲ್ ಲೋಕುರಾಚಿ ಅವರು ಕೂಡ ಮಹಿಳಾ ಪಾದಚಾರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು. ಆಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಕೌಶಲ್ ಅವರನ್ನು ನಾಲ್ಕು ವರ್ಷ ಕ್ರಿಕೆಟಿನಿಂದ ಅಮಾನತು ಮಾಡಿ ಜೈಲಿಗೆ ಕೂಡ ಕಳುಹಿಸಲಾಗಿತ್ತು. ಇದೀಗ ಕುಸಲ್ ಕೂಡ ಅಮಾನತುಗೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಶ್ರೀಲಂಕಾದ ರಾಜಧಾನಿ ಕೊಲಂಬೊದ ಹೊರ ಭಾಗದಲ್ಲಿ ಸೈಕಲ್ ಸವಾರನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದ ಅಪಘಾತ ಪ್ರಕರಣದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುಸಲ್ ಮೆಂಡಿಸ್ ಶ್ರೀಲಂಕಾದ ಪುನದುರಾ ಪ್ರದೇಶದಲ್ಲಿ ತನ್ನ ಎಸ್‍ಯುವಿ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿ ಸೈಕಲ್ ಓಡಿಸುತ್ತಿದ್ದ ಓರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಕುಸಲ್ ಮಂಡಿಸ್ ಅವರನ್ನು ಬಂಧಿಸಿದ್ದು, ಅವರ ಕಾರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಮಾರ್ಚ್‍ನಲ್ಲಿ ಶ್ರೀಲಂಕಾದಲ್ಲಿಯೇ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದ 16 ಜನರಲ್ಲಿ ಮೆಂಡಿಸ್ ಕೂಡ ಇದ್ದರು. ಆದರೆ ಕೊರೊನ ವೈರಸ್ ಭೀತಿಯಿಂದ ಈ ಸರಣಿಯನ್ನು ರದ್ದುಮಾಡಲಾಗಿತ್ತು.

Leave a Reply

Your email address will not be published. Required fields are marked *