ಸುಶಾಂತ್ ಸಾವಿನ ತನಿಖೆಯ ಅರ್ಜಿ ಸುಪ್ರೀಂ ಕೋರ್ಟಲ್ಲಿ ವಜಾ!

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಜಾಗೊಳಿಸಿದ್ದಾರೆ. ಅಲ್ಕಾ ಪ್ರಿಯಾ ಎಂಬುವವರು ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುಶಾಂತ್ ಸಿಂಗ್ ಒಳ್ಳೆಯ ವ್ಯಕ್ತಿ. ಅವರು ನಾಸಾಕ್ಕೆ ತೆರಳಲು ಅನೇಕ ಮಕ್ಕಳಿಗೆ ಸಹಾಯ ಮಾಡಿದ್ದರು ಎಂದು ಅರ್ಜಿಯಲ್ಲಿ ಹೇಳಿದ್ದರು. ಒಬ್ಬ ವ್ಯಕ್ತಿ ಒಳ್ಳೆಯವನೋ ಅಥವಾ ಕೆಟ್ಟವನೋ ಎನ್ನುವುದು ತಮಗೆ ತಿಳಿದಿಲ್ಲ. ಆದರೆ ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಯಾವ ಕಾರಣಕ್ಕೂ ಸಿಬಿಐಗೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಎನ್ನುವುದು ಖಚಿತವಾಗಿದೆ. ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಸಿಬಿಐಗೆ ವರ್ಗಾಯಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸುಶಾಂತ್ ತಂದೆ ಪಟ್ನಾ ಪೊಲೀಸರಿಗೆ ನೀಡಿರುವ ದೂರಿನ ಅನ್ವಯ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಪ್ರಚೋದನೆ, ಮೋಸ, ಕಳ್ಳತನ ಸೇರಿದಂತೆ ರಿಯಾ ಚಕ್ರವರ್ತಿ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ರಿಯಾ ಕುಟುಂಬದ ಸದಸ್ಯರು ಸೇರಿದಂತೆ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *