ಸುಳ್ಯ: ಪತಿಯ ಅರಸಿ ಬಂದ ಮಹಿಳೆಯಿಂದ ಮುಖಂಡರಿಗೇ ಸವಾಲ್!

ಮಂಗಳೂರು: ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡು ಬೆಂಗಳೂರಿನಿಂದ ಸುಳ್ಯಕ್ಕೆ ಬಂದಿದ್ದ ಮಹಿಳೆಯೋರ್ವರು ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಮುಸ್ಲಿಂ ಮುಖಂಡರಿಗೇ ಸವಾಲ್ ಹಾಕುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದೆ.
ಪ್ರಕರಣದ ಮೂಲ ಎನಿಸಿರುವ ಬೆಂಗಳೂರಿನ ಆಸಿಯಾ ಎಂಬವರು ಸುಳ್ಯದ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಎಂಬವರನ್ನು ಮದುವೆಯಾಗಿರುವುದಾಗಿ ಹೇಳಿ ಮಹಿಳಾ ಆಯೋಗದ ಆದೇಶದೊಂದಿಗೆ ಜೂನ್ 26ರಂದು ಖಲೀಲ್‍ರ ಮನೆಗೆ ಬಂದು ಕುಳಿತಿದ್ದರು. ಈ ವಿಚಾರ ಸುಳ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರಿಂದ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಎರಡು ಬಾರಿ ಮಾತುಕತೆ ನಡೆದಿದ್ದು, 15 ದಿನಗಳಲ್ಲಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ತರುವಂತೆ ಖಲೀಲ್ ಮತ್ತು ಆಸಿಯಾರಿಗೆ ಸೂಚಿಸಲಾಗಿತ್ತು. ಇದೇ ವೇಳೆ ಖಲೀಲ್ ಹೈಕೋರ್ಟಿಗೆ ಮೊರೆ ಹೋಗಿ ಮಹಿಳಾ ಆಯೋಗದ ನೋಟೀಸಿಗೆ ತಡೆಯಾಜ್ಞೆ ತಂದಿದ್ದರು.
ಇಷ್ಟೆಲ್ಲ ನಡೆದ ಬಳಿಕವೂ ಮಹಿಳೆ ಈಗಲೂ ಸುಳ್ಯದಲ್ಲೇ ಇದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಮಾತನಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮುಸ್ಲಿಂ ಸಮುದಾಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ನಾನು ಸುಳ್ಯಕ್ಕೆ ಬಂದು ಒಂದು ತಿಂಗಳಾಗಿದ್ದು, ಪತಿಗಾಗಿ ಒಂಟಿ ಹೋರಾಟ ನಡೆಸುತ್ತಿದ್ದೇನೆ. ಎಲ್ಲರಿಗೆ ಅದರಲ್ಲೂ ಸುಳ್ಯದ ಜನರಿಗೆ ಸತ್ಯ ಗೊತ್ತಿದ್ದರೂ ಮೌನ ಪಾಲಿಸಿದ್ದಾರೆ.
ನಿಮ್ಮ ಈ ರೀತಿಯ ಮೌನ ಯಾರನ್ನು ರಕ್ಷಿಸಲು ಎನ್ನುವುದು ಗೊತ್ತಾಗುತ್ತಿಲ್ಲ, ಆದರೆ ದೇವನ ಮುಂದೆ ಉತ್ತರ ನೀಡಲೇಬೇಕಾಗಿದೆ. ಆತ ನನ್ನನ್ನು ಮತಾಂತರಿಸಿ ವಿವಾಹವಾಗಿದ್ದಾನೆ, ಇಷ್ಟು ವರ್ಷ ನಾವು ಜೊತೆಯಾಗಿ ಜೀವನ ಸಾಗಿಸಿದ್ದೇವೆ. ಈಗ ಬೇಡ ಎಂದರೆ ಹೇಗೆ? ನಾನು ಸುಳ್ಯದಿಂದ ಹೋಗಬೇಕಾದರೆ ಪತಿ ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಜೊತೆ ಮಾತ್ರ. ಎಷ್ಟು ಕಷ್ಟ ಬಂದರೂ ಸಹಿಸುತ್ತೇನೆ. ಮುಂದಕ್ಕೆ ಯಾವುದಾದರೂ ಸಮಸ್ಯೆ ಬಂದರೆ ಅದಕ್ಕೆ ಸುಳ್ಯದ ಜನರ ಮೌನವೇ ಕಾರಣ. ನಾನು ನಿಮ್ಮ ಧರ್ಮ ಸ್ವೀಕರಿಸಿ ಬಂದಿದ್ದಕ್ಕೆ ಇಂಥ ಶಿಕ್ಷೆಯೇ ಎಂದು ಮುಸ್ಲಿಂ ಮುಖಂಡರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಇದರಿಂದಾಗಿ ಈ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.