ಸತತ ಲಾಕ್ ಡೌನ್ ಉಲ್ಲಂಘನೆ: ಸುರತ್ಕಲ್ “ಮೋರ್” ಕೇಳೋರಿಲ್ಲ!

ಸುರತ್ಕಲ್: ಸತತವಾಗಿ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿರುವ “ಮೋರ್” ಸೂಪರ್ ಮಾರ್ಕೆಟ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಆದಿತ್ಯವಾರವೂ ಕರ್ಫ್ಯೂ ಉಲ್ಲಂಘನೆ ಮಾಡಿ ನಸುಕಿನಿಂದಲೇ ತೆರೆದಿದ್ದ ಮೋರ್ ಸೂಪರ್ ಮಾರ್ಕೆಟ್ ಇಂದು ನಸುಕಿನ 5 ಗಂಟೆಯಿಂದಲೇ ಕಾರ್ಯಾಚರಣೆ ನಡೆಸಿದೆ. ಸತತ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಕಾನೂನಿಗೂ ಡೋಂಟ್ ಕೇರ್ ಅಂದಿರುವ ಮೋರ್ ಸೂಪರ್ ಮಾರ್ಕೆಟ್ ಯಾರೂ ಕೇಳೋರಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಒಂದು ವಾರ ಕಾಲ ಲಾಕ್ ಡೌನ್ ಜಾರಿಯಿರಲಿದ್ದು ಬೆಳಿಗ್ಗೆ 8ರಿಂದ 11 ಗಂಟೆಯ ತನಕ ಆಹಾರ, ತರಕಾರಿ ಹಣ್ಣು ಅಗತ್ಯವಸ್ತುಗಳ ಮಾರಾಟ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೋರ್ ಸೂಪರ್ ಮಾರ್ಕೆಟ್ ಇಂದು ಬೆಳಿಗ್ಗೆ ಐದು ಗಂಟೆಗೆ ತೆರೆಯಲ್ಪಟ್ಟು ಲಾಕ್ ಡೌನ್ ನಿಯಮ ಉಲ್ಲಂಘಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಸುಕಿನಿಂದಲೇ ಜನರು ಮುಗಿಬಿದ್ದಿದ್ದು ಸಾಮಾಜಿಕ ಅಂತರವೂ ಇಲ್ಲ, ಸ್ಯಾನಿಟೈಸ್, ದೇಹದ ಉಷ್ಣತೆ ಪರೀಕ್ಷೆ, ಗ್ರಾಹಕರ ಸಂಪೂರ್ಣ ಮಾಹಿತಿ ಪಡೆಯುವ ವ್ಯವಸ್ಥೆ ಇದಾವುದೂ ಇಲ್ಲಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಕಳೆದ ಭಾನುವಾರ ಲಾಕ್ ಡೌನ್ ಉಲ್ಲಂಘಿಸಿ ವ್ಯಾಪಾರ ಮಾಡಿದ್ದು ಪೊಲೀಸರು ಕ್ರಮ ಕೈಗೊಂಡಿದ್ದ ಬಗ್ಗೆ ಜಯಕಿರಣ ವರದಿ ಮಾಡಿತ್ತು. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಐದು ಗಂಟೆಗೆ ಕೆಲಸಕ್ಕೆ ಹಾಜರಾಗಲು ಒತ್ತಾಯಿಸಲಾಗುತ್ತಿದ್ದು ಅವರು ನಾಲ್ಕು ಗಂಟೆಗೆ ಎದ್ದು ಹೊರಡಲು ಅಣಿಯಾಗಬೇಕಾಗಿದೆ. ಇಲ್ಲದೇ ಇದ್ದರೆ ಕೆಲಸ ಕಳೆದು ಕೊಳ್ಳುವ ಭೀತಿ ಎದುರಾಗಿದೆ. ಜಿಲ್ಲೆಗೊಂದು ನಿಯಮ, ಮೋರ್ ಗೆ ಇನ್ನೊಂದು ನಿಯಮವೇ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
ಪೊಲೀಸ್ ಗೂ ಡೋಂಟ್ ಕೇರ್!
ಕಳೆದ ಆದಿತ್ಯವಾರ ಕೂಡಾ ಕರ್ಫ್ಯೂ ಉಲ್ಲಂಘಿಸಿ ತೆರೆದಿದ್ದ ಬಗ್ಗೆ ಸಾರ್ವಜನಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೆನೇಜರ್ ಹಾಗೂ ಇತರರನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮೆನೇಜರ್ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದು ನಡೆದಿತ್ತು. ಕೊನೆಗೆ ಕೇಸ್ ಹಾಕುವುದಾಗಿ ಹೇಳಿದಾಗ ತಣ್ಣಗಾಗಿದ್ದ ಮೆನೇಜರ್ ಇನ್ನು ನಿಯಮ ಪಾಲಿಸುವುದಾಗಿ ಹೇಳಿ ಜಾರಿಕೊಂಡಿದ್ದರು. ಆದರೆ ಇಂದು ಮತ್ತೆ ಪೊಲೀಸರು ಪ್ರಶ್ನೆ ಮಾಡಿದ ವೇಳೆ “ನಾವು ಓಪನ್ ಇಡ್ತೀವಿ ನೀವು ಏನು ಬೇಕಾದ್ರೂ ಮಾಡಿ. ನಾವು ಯಾರಿಗೂ ಕೇರ್ ಮಾಡಲ್ಲ” ಎಂದು ಹೇಳಿದ್ದಾಗಿ ಸುರತ್ಕಲ್ ಠಾಣೆ ಸಿಬ್ಬಂದಿ ಹೇಳುತ್ತಾರೆ. ಮೋರ್ ಮಂಗಳೂರು ಅಧಿಕಾರಿ ವಿನೋದ್ ಎಂಬವರಿಗೆ ಕರೆ ಮಾಡಿದ್ರೆ “ಹೌದು ಓಪನ್ ಇಡ್ತೀವಿ ನಮ್ಮದು ಅವಶ್ಯ ವಸ್ತುಗಳ ಮಾರಾಟ. ಯಾರಿಗೂ ಹೆದರಿ ಬಂದ್ ಮಾಡುವುದಿಲ್ಲ” ಅಂತಾರೆ. ಹೀಗಾದರೆ ಇವರನ್ನು ಕೇಳುವವರು ಜಿಲ್ಲೆಯಲ್ಲಿ ಇಲ್ಲವೇ ಎಂದು ಜನರು ಕೇಳುತ್ತಿದ್ದಾರೆ. ಕೇಸ್ ಹಾಕದೇ ಬಿಟ್ಟಿರುವ ಪೊಲೀಸರು ಮತ್ತು ರಾಜಕೀಯ ಬಲ ಹೊಂದಿರುವ ಮೋರ್ ಸೂಪರ್ ಮಾರ್ಕೆಟ್ ಬಗ್ಗೆ ಜಿಲ್ಲಾಡಳಿತ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.
ಗ್ರಾಹಕರು ಬಿಡಿ, ಸಿಬ್ಬಂದಿಗೂ ಸುರಕ್ಷತೆಯಿಲ್ಲ
ಮೋರ್ ಸೂಪರ್ ಮಾರ್ಕೆಟ್ ಗೆ ಹೆಚ್ಚಿನ ಗ್ರಾಹಕರು ಎಂಆರ್ ಪಿಎಲ್, ಎಸ್ ಇ ಝಡ್ ನೌಕರರು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ದಾಖಲಾಗಿವೆ. ಹೀಗಿದ್ದೂ ಹೊರರಾಜ್ಯಗಳ ಗ್ರಾಹಕರು ಇಲ್ಲಿ ಯಾವೊಂದು ಸುರಕ್ಷಾ ಕ್ರಮವೂ ಇಲ್ಲದೆ ಖರೀದಿಗೆ ಬರುತ್ತಾರೆ. ಇದರಿಂದ ಗ್ರಾಹಕರು ಮಾತ್ರವಲ್ಲ ಸಿಬ್ಬಂದಿಗೂ ಕೊರೋನಾ ಭಯ ಎದುರಾಗಿದೆ. ಕನಿಷ್ಠ ಸುರಕ್ಷಾ ಕ್ರಮಗಳನ್ನೂ ಪಾಲಿಸದ ಮೋರ್ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತದ ಕೈ ತಡೆದಿರುವ ಕಾಣದ ಕೈಗಳು ಯಾವುದು ಎನ್ನುವುದು ಉತ್ತರ ಸಿಗದ ಪ್ರಶ್ನೆಯಾಗಿದೆ.