ಸಕಲ ಸರಕಾರಿ ಗೌರವದೊಂದಿಗೆ ತಹಶೀಲ್ದಾರ್ ಅಂತ್ಯಕ್ರಿಯೆ

ಕೋಲಾರ: ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ಸಕಲ ಸರ್ಕಾರಿ ಗೌರವದೊಂದಿಗೆ ಬಂಗಾರ ಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ್ ಅವರ ಅಂತ್ಯ ಕ್ರಿಯೆಯು ಮೃತರ ಪತ್ನಿ ಅವರ ಸ್ವಗೃಹದಲ್ಲಿ ಇಂದು ನೆರವೇರಿತು. ಜಮೀನು ಸರ್ವೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಮತ್ತು ತಹಶೀಲ್ದಾರ್ ಚಂದ್ರಮೌಳೇಶ್ವರ ನಡುವೆ ಮಾತಿಗೆ ಚಕಮಕಿ ನಡೆದು ದುಷ್ರ್ಕರ್ಮಿ ಚಾಕುವಿನಿಂದ ಇರಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ತಹಶೀಲ್ದಾರರನ್ನು ಹೆಚ್ಚಿನ ಚಿಕೆತ್ಸೆಗಾಗಿ ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಘಟನೆ ಅತ್ಯಂತ ಅಮಾನುಷವಾಗಿದೆ ತುಂಬಾ ಪ್ರಾಮಾಣಿಕ, ಮಾನವೀಯ ವ್ಯಕ್ತಿತ್ವ ಉಳ್ಳಂತಹ ವ್ಯಕ್ತಿ ಇವರು. ಇವರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ಕುಟುಂಬಕ್ಕೆ 25 ಲಕ್ಷ ಪರಿಹಾರ ಧನವನ್ನು ನೀಡಲಾಗುತ್ತದೆ, ಮಗನಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ತಿಳಿಸಿದರು.
ಸರ್ಕಾರಿ ಸೇವೆ ಮಾಡುವ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಮೊದಲ ಆದ್ಯತೆ, ಅತ್ಯವಶ್ಯಕ ಸನ್ನಿವೇಶಗಳು ಇದ್ದಾಗ ಕೇವಲ ಬೇರೆಯವರಿಗೆ ರಕ್ಷಣೆ ಕೊಟ್ಟರೆ ಸಾಲದು ತಾವು ರಕ್ಷಣೆ ಪಡೆದು ಇಂತಹ ಕಾರ್ಯಗಳನ್ನು ಮಾಡಲು ಸೂಚಿಸಲು ಮುಖ್ಯಮಂತ್ರಿ ಅವರ ಜೊತೆ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕುಟುಂಬದ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡರು ಈರೀತಿ ಬೇರೆ ಯಾವ ಅಧಿಕಾರಿಗೂ ಆಗದ ರೀತಿಯಲ್ಲಿ ಕಾನೂನು ರುಪಿಸುವಂತೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಸಿ ಮಾಧುಸ್ವಾಮಿ ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಒಡಗಿಸಿಕೊಡುವ ಭರವಸೆಯನ್ನು ನೀಡಿದರು. ಅಂತ್ಯಕ್ರಿಯೆಯಲ್ಲಿ ಕೋಲಾರ ಜಿಲ್ಲಾಧಿಕಾರಿಗಳಾದ ಸತ್ಯಭಾಮ, ತುಮಕೂರು ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಡಾ. ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಜಿಲ್ಲಾಧ್ಯಕ್ಷ ನರಸಿಂಹರಾಜ, ಕಂದಾಯ ನಿರೀಕ್ಷಕ ರಮೇಶ್, ಕೆ.ವಿ. ನಾರಾಯಣ್, ನಾಗಭೂಷಣ್, ಭಾಗವಹಿಸಿದ್ದರು.