ಶಿರ್ವ: ಸ್ನೇಹಿತನ ಕೊಂದು ಅಂಗಳದಲ್ಲೇ ಶವ ಸುಡಲು ಯತ್ನಿಸಿ ಸಿಕ್ಕಿಬಿದ್ದ!

ಕಟಪಾಡಿ: ಕುಡಿದ ಅಮಲಿನಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದು ಒಬ್ಬ ಇನ್ನೊಬ್ಬನನ್ನು ಇರಿದು ಕೊಲೆಗೈದಿದ್ದಲ್ಲದೆ ಪ್ರಕರಣ ಮುಚ್ಚಿಹಾಕಲು ಶವವನ್ನು ಅಂಗಳದಲ್ಲೇ ತೆಂಗಿನ ಗರಿ ಬಳಸಿ ಸುಡಲು ಯತ್ನಿಸಿ ಅರೆಬರೆ ಸುಟ್ಟ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎರ್ಮಾಳಿನ ಹೇಮಂತ್ ಪೂಜಾರಿ(45) ಕೊಲೆಯಾದವರು. ಶಿರ್ವ ಕಳತ್ತೂರಿನ ಪುಂಜಾಲ್‌ಕಟ್ಟೆಯ ನಿವಾಸಿ ಅಲ್ಬರ್ಟ್(50) ಪ್ರಕರಣದಲ್ಲಿ ಆರೋಪಿಯಾಗಿದ್ದು ಪೊಲೀಸ್ ವಶವಾಗಿದ್ದಾನೆ.
ಪ್ರಕರಣದ ವಿವರ:
ಎರಡು ದಿನಗಳ ಹಿಂದೆ ಹೇಮಂತ್ ತನ್ನ ಸ್ನೇಹಿತ ಅಲ್ಬರ್ಟ್ ಮನೆಗೆ ಹೋಗಿದ್ದು ಬಳಿಕ ನಾಪತ್ತೆಯಾಗಿದ್ದರು. ಮನೆಮಂದಿ ಆತಂಕಗೊಂಡು ಹುಡುಕಾಟ ನಡೆಸಿದ್ದು ಆಲ್ಬರ್ಟ್ ಹಾರಿಕೆ ಉತ್ತರ ನೀಡಿದ್ದ. ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂದಿದ್ದಾನೆ ಎನ್ನಲಾಗಿದೆ. ಇವರು ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದು, ಹೇಮಂತ್ ಬುಧವಾರ ಆಲ್ಬರ್ಟ್ ಮನೆಗೆ ಹೋಗಿದ್ದರು. ಇಬ್ಬರು ಒಟ್ಟಿಗೆ ಮದ್ಯ ಸೇವಿಸಿದ್ದು ಈ ವೇಳೆ ಇಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದ್ದು, ಆರೋಪಿ ಅಲ್ಬರ್ಟ್ ಸ್ನೇಹಿತನನ್ನೇ ಕೊಂದಿದ್ದಾನೆಂದು ತಿಳಿದು ಬಂದಿದೆ. ಕೊಲೆಗೈದ ನಂತರ ಆರೋಪಿಯು ಮೃತದೇಹ ಸುಡಲು ಪ್ರಯತ್ನಿಸಿದ್ದ.
ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಮಹೇಶ ಪ್ರಸಾದ್ , ಶಿರ್ವ ಠಾಣಾಧಿಕಾರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *