ವೋಕ್ಸ್-ಬ್ರಾಡ್ ದಾಳಿಗೆ ಕುಸಿದ ವಿಂಡೀಸ್: ಆಂಗ್ಲಪಡೆಗೆ 219 ರನ್‍ಗಳ ಮುನ್ನಡೆ

ಮ್ಯಾಂಚೆಸ್ಟರ್: ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ನಡೆಸಿದ ಕಟ್ಟುನಿಟ್ಟಿನ ಬೌಲಿಂಗ್ ದಾಳಿಯ ನೆರವಿನಿಂದ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‍ನ ನಾಲ್ಕನೇ ದಿನದಲ್ಲಿ ವಿಂಡೀಸ್ 287 ರನ್‍ಗಳಿಗೆ ಸರ್ವಪತನ ಕಂಡಿದೆ. ಅತ್ತ ಒಟ್ಟಾರೆಯಾಗಿ ಇಂಗ್ಲೆಂಡ್ 219 ರನ್‍ಗಳ ಮುನ್ನಡೆ ಸಾಧಿಸಿದೆ. ಟೆಸ್ಟ್‍ನ ಮೂರನೇ ದಿನದಾಟ ಮಳೆಯ ಕಾರಣದಿಂದ ಸಂಪೂರ್ಣವಾಗಿ ರದ್ದುಗೊಂಡಿತ್ತು.
ನಾಲ್ಕನೇ ದಿನದಾಟದ ಆರಂಭದಲ್ಲೇ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಅಲ್ಝಾರಿ ಜೋಸೆಫ್ (32) ನಿರ್ಗಮಿಸಿದರೆ ಬ್ರಾಥ್‍ವ್ಹೇಟ್ (75) ಉತ್ತಮ ಬ್ಯಾಟಿಂಗ್ ಮುಂದುವರೆಸಿ, ಅರ್ಧಶತಕ ಸಿಡಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲುವಲ್ಲಿ ಶಾಯ್ ಹೋಪ್ (25) ವಿಫಲರಾದರೆ ಶಮಾರಾ ಬ್ರೂಕ್ಸ್ (68) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು. ಬೌಲಿಂಗ್‍ನಲ್ಲಿ ಮಿಂಚಿದ್ದ ರೋಸ್ಟನ್ ಚೇಸ್ (51) ಕೂಡ ಅರ್ಧಶತಕ ದಾಖಲಿಸಿದರು. ಆದರೆ ಯಾರೂ ಕೂಡ ದೊಡ್ಡ ಇನ್ನಿಂಗ್ಸ್ ಸಂಘಟಿಸುವಲ್ಲಿ ವಿಫಲತೆ ಕಂಡರು. ಬ್ಲ್ಯಾಕ್‍ವುಡ್ ಹಾಗೂ ಡೌರಿಚ್ ಶೂನ್ಯಕ್ಕೆ ನಿರ್ಗಮಿಸಿದ್ದು, ಕೂಡ ತಂಡಕ್ಕೆ ಆಘಾತ ಕಂಡಿತು. ಅಂತಿಮವಾಗಿ ವಿಂಡೀಸ್ 99 ಓವರ್‍ಗಳಲ್ಲಿ 287 ರನ್‍ಗಳಿಗೆ ಸರ್ವಪತನ ಕಂಡಿತು. ಆಂಗ್ಲ ಪರ ಬ್ರಾಡ್ ಹಾಗೂ ವೋಕ್ಸ್ ತಲಾ ಮೂರು ವಿಕೆಟ್ ಪಡದರು.
ಇನ್ನು ಅತ್ತ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಎಂಟು ಓವರ್‍ಗಳಲ್ಲಿ 37 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಜೋಸ್ ಬಟ್ಲರ್ (0) ಹಾಗೂ ಕ್ರಾಲಿ (11) ಬೇಗನೇ ನಿರ್ಗಮಿಸಿದರು. ಪ್ರಥಮ ಇನ್ನಿಂಗ್ಸ್ ಅಮೋಘ ಶತಕ ಸಿಡಿಸಿದ್ದ ಬೆನ್ ಸ್ಟೋಕ್ಸ್ (16) ಹಾಗೂ ಜೋ ರೂಟ್ (8) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ಕೆಮಾರ್ ರೋಚ್ ಎರಡು ವಿಕೆಟ್ ಪಡೆದರು. ಒಟ್ಟಾರೆಯಾಗಿ ಆಂಗ್ಲಪಡೆ 219 ರನ್‍ಗಳ ಮುನ್ನಡೆ ದಾಖಲಿಸಿದೆ. ಹಾಗಾಗಿ ಅಂತಿಮ ದಿನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ, ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಇರಾದೆ ಬಹುಷಃ ಇಂಗ್ಲೆಂಡ್ ಪಾಳಯದಲ್ಲಿದೆ. ಈಗಾಗಲೇ ಸರಣಿಯಲ್ಲಿ ವಿಂಡೀಸ್ 1-0 ಅಂತರ ಮುನ್ನಡೆ ಕಾಯ್ದುಕೊಂಡಿದೆ.

Leave a Reply

Your email address will not be published. Required fields are marked *