ವಿಜಯಪುರ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಹಲ್ಲೆ ನಡೆದಿಲ್ಲ, ಹಳೇ ವೈಷಮ್ಯದಿಂದ ಕೃತ್ಯ -ಡಿವೈಎಸ್ಪಿ

ವಿಜಯಪುರ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನನ್ನು ಸಾಮೂಹಿಕವಾಗಿ ಬಟ್ಟೆ ಬಿಚ್ಚಿ ಹಲ್ಲೆ ನಡೆಸಲಾಗಿದೆ ಎಂದು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು ಆದರೆ ಇದು ಹಳೇ ವೈಷಮ್ಯದಿಂದ ನಡೆದ ಕೃತ್ಯ ಎಂದು ಡಿವೈ ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದ್ದು ನಿನ್ನೆ ಪ್ರಕರಣ ಬೆಳಕಿಗೆ ಬಂದಿತ್ತು.
ಗ್ರಾಮದ ಯುವಕ ಕಾಶೀನಾಥ ಯಂಕಪ್ಪ ತಳವಾರ(28) ಹಲ್ಲೆಗೊಳಗಾದವ. ಈತನ ಮೇಲೆ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಗ್ರಾಮದ ಸುಮಾರು 19 ಮಂದಿ ಸೇರಿ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಅದೇ ಮಾರ್ಗದಲ್ಲಿ ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋರೆಯ ವಾಹನ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆಗೀಡಾದಾತನನ್ನು ಮುದ್ದೇಬಿಹಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಥಳಿತಕ್ಕೊಳಗಾದ ಯುವಕ, ಕಳೆದ ಎರಡು ವರ್ಷಗಳ ಹಿಂದೆಯೂ ಇದೇ ಕಾರಣಕ್ಕಾಗಿ ಗೂಸಾ ತಿಂದಿದ್ದನಂತೆ. ಹೀಗಾಗಿ ಹಳೆ ವೈಷಮ್ಯದಿಂದಾಗಿ ಆರೋಪಿಗಳು ಆತನ ಬಟ್ಟೆ ಕಳಚಿ, ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಬಸವನಬಾಗೇವಾಡಿ ಡಿವೈಎಸ್‍ಪಿ ಶಾಂತವೀರ ತಿಳಿಸಿದ್ದಾರೆ. 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಠಾಣೆಗೆ ಕರೆದು ತನಿಖೆ ಆರಂಭಿಸಿದ್ದಾಗಿ ತಿಳಿಸಿದರು.

Leave a Reply

Your email address will not be published. Required fields are marked *