ವಿಕಾಸ್ ದುಬೆ ಎನ್‌ಕೌಂಟರ್ ಸುತ್ತ ಅನುಮಾನದ ಹುತ್ತ…

ಲಕ್ನೋ: ನಿನ್ನೆ ಮುಂಜಾನೆ ಪೊಲೀಸ್ ಎನ್‍ಕೌಂಟರ್‌ನಲ್ಲಿ ಹತ್ಯೆಯಾದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಸಾವಿನ ಬಗ್ಗೆ ಹತ್ತು ಹಲವು ಅನುಮಾನಗಳು ಮೂಡಿದ್ದು, ಮುಖ್ಯವಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಹೇಳಿಕೆಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಪೊಲೀಸರಿಗೆ ತಿರುಗುಬಾಣವಾಗುವ ಎಲ್ಲಾ ಲಕ್ಷಣಗಳು ಮೂಡುತ್ತಿವೆ.
ಮೂಲಗಳ ಪ್ರಕಾರ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಕಾರಣಗಳೇ ಸದ್ಯ ಚರ್ಚೆಗೆ ಗ್ರಾಸವಾಗಿದೆ. ನಮ್ಮ ಬೆಂಗಾವಲು ವಾಹನ ಪಲ್ಟಿಯಾದ ನಂತರ ದುಬೆಯನ್ನು ನಾವು ಕಾರಿನಿಂದ ಹೊರ ಎಳೆದು ಹಾಕಿದ್ದು, ಆದರೆ ಆತ ಪೊಲೀಸರಿಗೆ ಗುಂಡು ಹಾರಿಸಿ ಓಡಲು ಯತ್ನಿಸಿದನು. ಈ ವೇಳೆ ನಾವು ಶೂಟ್ ಮಾಡಿದ್ದೇವೆ ಎಂದು ಪೊಲೀಸರು ಎನ್‌ಕೌಂಟರ್ ಬಳಿಕೆ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯಲ್ಲೂ ಕೂಡ ಗೊಂದಲ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ಒಂದು ವೇಳೆ ದುಬೆ ಓಡುತ್ತಿದ್ದರೆ ಆತನ ಎದೆಗೆ ಹಿಂಬದಿಯಿಂದ ಪೊಲೀಸರು ಹೇಗೆ ನಿಖರವಾಗಿ ಗುಂಡು ಹಾರಿಸಿದರು ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಇಲ್ಲಿ ಪೊಲೀಸರು ಕೃಷಿ ಹೊಲದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಂದರೆ ದುಬೆ ಕೃಷಿ ಕೃಷಿ ಹೊಲದಲ್ಲಿ ತಪ್ಪಿಸಿಕೊಂಡು ಓಡುವಾಗ ಗುಂಡು ಹೊಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಎನ್‍ಕೌಂಟರ್ ನಡೆದಿರುವುದು ನಿರ್ಜನ ಪ್ರದೇಶದಲ್ಲಿ, ಅದೂ ಕೂಡ ಬೆಳಗ್ಗಿನ ಜಾವ. ಅಲ್ಲದೆ ದುಬೆ ಬಲಗಾಲಿಗೆ ಕಬ್ಬಿಣ ರಾಡ್ ಅನ್ನು ಹಾಕಲಾಗಿದೆ. ಜೊತೆಗೆ ಆತ ಇತ್ತೀಚೆಗೆ ಕುಂಟುತ್ತಿದ್ದ ಎಂದು ಹೇಳಲಾಗಿದೆ. ಹೀಗಿರುವಾಗ ಆತ ಹೇಗೆ ಓಡಿಹೋಗುತ್ತಾನೆ ಎಂಬ ಅನುಮಾನ ಮೂಡಿದೆ. ಅಲ್ಲದೆ ಯುಪಿ ಪೊಲೀಸರು, ದುಬೆ ನಮ್ಮ ಗಾಯಗೊಂಡ ಪೊಲೀಸರ ಬಳಿ ಬಂದೂಕುಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿದ ಎಂದು ಹೇಳಿದ್ದಾರೆ. ಆದರೆ ನಿಯಮಗಳ ಪ್ರಕಾರ, ಯಾವುದೇ ಆರೋಪಿಯನ್ನು ಬೇರೆ ಕಡೆ ಸಾಗಿಸುವಾಗ ಆತನಿಗೆ ಕೈಕೋಳ ಹಾಕಬೇಕು. ಅದನ್ನು ಹಾಕಿದ್ದರೇ ಆತ ಹೇಗೆ ಬಂದೂಕನ್ನು ಕಿತ್ತುಕೊಂಡ? ಇಲ್ಲವೇ ಅದನ್ನು ಹಾಕಿರಲಿಲ್ಲ ಎಂದರೆ ಏಕೆ ಹಾಕಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ವರದಿಯ ಪ್ರಕಾರ, ದುಬೆಯನ್ನು ಮಧ್ಯ ಪ್ರದೇಶದಿಂದ ಟಾಟಾ ಸಫಾರಿ ಕಾರಿನಲ್ಲಿ ಕರೆದಿಯ್ಯಲಾಗುತ್ತಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಪಲ್ಟಿಯಾಗಿದ್ದು ಎಸ್‍ಯೂವಿ ಕಾರು. ಮಾರ್ಗ ಮಧ್ಯ ಕಾರು ಚೇಂಚ್ ಆಗಲು ಕಾರಣವೇನು ಎಂಬ ಅನುಮಾನ ಬಂದಿದೆ. ಹೀಗೆ ಪೊಲೀಸರು ನೀಡಿರುವ ಹಲವು ಅಂಶಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.