ಲಾಕ್ಡೌನ್ ಎನ್ನುವ ಪರ್ವತ ಪ್ರಸವ!

#ಟಿ.ಕೆ. ಕಾಸರಗೋಡು
ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ಸಂಪೂರ್ಣ ಸೋತು ಹೈರಾಣಾಗಿದೆ. ಇಡುವ ಪ್ರತಿ ಹೆಜ್ಜೆಯಲ್ಲೂ ತಪ್ಪು ಕಂಡು ಬರುತ್ತಿದೆ.
ಮುಖ್ಯಮಂತ್ರಿಯವರಿಂದ ಹಿಡಿದು ಸಚಿವರು, ಎಂ.ಎಲ್.ಎ. ತಳಮಟ್ಟದ ಅಧಿಕಾರಿಯವರೊಳಗೆ ಸಮನ್ವಯತೆ ಇಲ್ಲ! ತೀರಾ ಇಲ್ಲ! ಆದುದರಿಂದ ಕೊರೊನಾ ನಿಯಂತ್ರಣದ ಬಗ್ಗೆ ಲಾಕ್ ಡೌನ್ ಬಗ್ಗೆ ಅವರವರಿಗೆ ತೋಚಿದಂತೆ ಹೇಳಿಕೆ, ಮಾಧ್ಯಮಕ್ಕೆ ಪ್ರಸ್ತಾವನೆ ಕೊಡುತ್ತಿದ್ದಾರೆ. ಇದು ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಲಾಕ್ಡೌನ್ ಅನಿವಾರ್ಯತೆ ಖಂಡಿತಾ ಇರಲಿಲ್ಲ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಖಂಡಿತಾ ಪರಿಹಾರ ಅಲ್ಲ. ಈಗಾಗಲೆ ಆರ್ಥಿಕ ವ್ಯವಸ್ಥೆಯ ಭಾರೀ ಹೊಡೆತದಿಂದ ಕಂಗಾಲಾದ ಬಡ ಕುಟುಂಬಗಳು ಆಕಾಶದತ್ತ ಮುಖಮಾಡಿ ದೇವರ ಬರವನ್ನು ಕಾದು ಕುಳಿತಿವೆ! ಆದರೆ ಬರುತ್ತಾ ಇರುವುದು ವಿಪತ್ತು, ಆಪತ್ತು, ಸಂಕಟ. ನಮ್ಮ ಆಡಳಿತಾರೂಢರು ತಂದು ಕೊಡುವ ಕಿರಿ ಕಿರಿ!
ಉಡುಪಿ ಶಾಸಕ ರಘುಪತಿಭಟ್ ಉಡುಪಿ ಜಿಲ್ಲೆಗೆ ಲಾಕ್ಡೌನ್ ಬೇಡ ಈಗಾಗಲೆ ಜನರು ಸೋತು ಹೋಗಿದ್ದಾರೆ. ದಿನಕೂಲಿ, ನೌಕರರ, ಕೂಲಿಕಾರ್ಮಿಕರ ಬಗ್ಗೆ ಯೋಚಿಸಬೇಕು ಅಂದರು. ಈ ಮಾತು ನೂರಕ್ಕೆ ನೂರು ಸತ್ಯ. ಆದರೆ ದಕ್ಷಿಣ ಕನ್ನಡದ ಅತಿರಥ ಮಹಾರಥರು ಕೊರೊನಾ ನಿಯಂತ್ರಣಕ್ಕೆ ಕಂಡು ಕೊಳ್ಳುವ ಮಾರ್ಗವೆಂದರೆ ಲಾಕ್ಡೌನ್! ಒಂದು ವಾರ ಮನೆಯಲ್ಲಿ ಇರಿ. ಸೇಫಾಗಿ ಅನ್ನುತ್ತಾರೆ. ಮನೆಯೊಳಗಿನ ಒಲೆ ಆಡಳಿತಶಾಹಿ ಉರಿಸುತ್ತಿದೆಯೇ? ಇದು ಅಲೋಚಿಸಬೇಕಾದ ಮಾತು. ದಕ್ಷಿಣ ಕನ್ನಡದಲ್ಲಿ ಒಂದು ವಾರದ ಲಾಕ್ ಡೌನ್ ಮಾಡಿದರೆ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಅಂತ ಇವರುಗಳು ಆಶ್ವಾಸನೆ ಕೊಡುತ್ತಾರೆಯೇ?
ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತ ಇದೆ. ಏನು ಮಾಡೋಣ? ಆಡಳಿತ ಶಾಹಿ ಹೇಳುವುದು ಲಾಕ್ ಡೌನ್ ಪ್ರತ್ಯುತ್ತರ. ಸಾಮಾನ್ಯ ಪ್ರಜೆ ಮಾತ್ರ ನಿರುತ್ತರ. ದೊಡ್ಡದೊಂದು ಪರ್ವತ. ಏನೋ ಸದ್ದಾಯಿತು! ಏನೆಂದು ಜನರು ಕೇಳಿದರು. ಪರ್ವತದ ಪ್ರಸವ ಆಗುತ್ತಿದೆ ಅಂತ ಬುದ್ದಿವಂತರೆನ್ನುವರು. ಉಪದೇಶ ಕೊಟ್ಟರು. ಆದರೆ ಆದದ್ದು ಮಾತ್ರ ಏನು ಗೊತ್ತೇ? ಚಿಕ್ಕ ಇಲಿಯೊಂದು ಬೆಟ್ಟದ ಬಿಲದಿಂದ ಹೊರ ಬಂದು ಬಿಟ್ಟಿತು! ಲಾಕ್ಡೌನ್ ಅಂತ ಪರಿಹಾರ ಹೇಳುವ ಆಡಳಿತಶಾಹಿಗಳ ನಿರ್ಧಾರ ಇದರಿಂದ ಒಂದಿಷ್ಟೂ ಭಿನ್ನವಾಗಿಲ್ಲ.
ಕರ್ನಾಟಕ ಸರಕಾರ ನಿಮಿಷಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಯಾವ ನಿರ್ಧಾರಗಳೂ ಸ್ಥಿರ ಅಲ್ಲ! ಅಸ್ಥಿರ!. ಲಾಕ್ಡೌನ್ ಹದಿನಾಲ್ಕು ದಿವಸ ಅಂದ್ರು. ಈಗ ಮುಖ್ಯಮಂತ್ರಿಗಳು ಹೇಳ್ತಾ ಇದ್ದಾರೆ. ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ ಬರೇ ಒಂದು ವಾರ ಲಾಕ್ಡೌನ್ ಅಂತ. ಲಾಕ್ ಡೌನ್ ವೇಳೆ ಮದ್ಯದ ಅಂಗಡಿಗಳು ತೆರೆಯುತ್ತವೆ ಅಂತ ಸುದ್ದಿ ಪ್ರಸಾರ ಆಯಿತು. ಮರುಗಳಿಗೆಯಲ್ಲಿ ಮದ್ಯದ ಅಂಗಡಿ ತೆರೆಯುವುದಿಲ್ಲ ಅಂತ ಸುದ್ದಿ ಬಿತ್ತರ ಆಯಿತು. ಲಾಕ್ ಡೌನ್ ಆಯಾ ಜಿಲ್ಲಾ ಆಡಳಿತಕ್ಕೆ ಎನ್ನುವ ತುತ್ತೂರಿ ಈಗ.
ಒಂದೊಂದು ಕಡೆ ಒಂದೊಂದು ರೀತಿ ನಿಯಮವಿದೆ. ಅತ್ಯಂತ ಹೆಚ್ಚಿನ ಕೊರೋನಾ ಇರುವ ಬೆಂಗಳೂರಿನಲ್ಲಿ ದಿನಸಿ ಅಂಗಡಿ, ಹಾಲು, ಮದ್ದು, ಮೀನು, ಮಾಂಸದ ಅಂಗಡಿ, ತರಕಾರೀ ಅಂಗಡಿ, ಬ್ಯಾಂಕು, ವಿಧಾನ ಸೌಧ ಕಚೇರಿ ತೆರೆಯುವ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗಿದೆ. ಆದರೆ ದಕ್ಷಿಣಕನ್ನಡ ದಲ್ಲಿ ಹಾಲು, ಮದ್ದು, ಅತ್ಯಂತ ಅವಶ್ಯಕವಾಗಿರುವ ಸೇವೆಗೆ ಮಾತ್ರ ಬಾಗಿಲು ತೆರೆಯುವುದಂತೆ! ಏನಿದು ವಿಪರ್ಯಾಸ. ಕೊರೊನಾ ನಿಯಂತ್ರಣ ಮಾಡುವುದು ಇವರುಗಳ ಉದ್ದೇಶವೇ? ಅಲ್ಲಾ ಕೊರೊನಾ ಎನ್ನುವ ಬೃಹತ್ ನಾಟಕ ಮಂಡಳಿಯಲ್ಲಿ ಲಾಕ್ಡೌನ್ ಎನ್ನುವ ಹರಿಕೆ ಸಂದಾವಣೆಯೇ? ಒಂದೂ ಗೊತ್ತಾಗುವುದಿಲ್ಲ.
ಬಸ್ಸುಗಳಲ್ಲಿ ಸ್ಯಾನಿಟೈಸರ್ ಇಡಬೇಕು ಅಂದ್ರು. ಒಂದನೇ ದಿವಸ ಸ್ಯಾನಿಟೈಸರ್! ಎರಡನೇ ದಿವಸ ಖಾಲಿ ಸ್ಯಾನಿಟೈಸರ್ ಬಾಟಲಿ! ಮೂರನೇಯ ದಿನ ಸ್ಯಾನಿಟೈಸರ್ ಬಾಟಲಿಯೇ ಕಾಣೆ! ಇದು ದಕ್ಷಿಣ ಕನ್ನಡದ ಕೊರೊನಾ ನಿಯಂತ್ರಣ ಮಂಡಳಿಯ ವೇ ಆಫ್ ಸ್ಟೈಲ್!
ಮಾಜಿ ಮಂತ್ರಿ ಪರಮೇಶ್ವರ ನಾಕರು ಮಗನ ಮದುವೆ ಅದ್ದೂರಿಯಾಗಿ ಮಾಡಬಹುದು! ಸರಕಾರದ ನಿಯಮಾವಳಿ ಗಾಳಿಗೆ ತೂರಬಹುದು. ಅಶೋಕ್ ಸಾಹೇಬರು ಹುಟ್ಟು ಹಬ್ಬ ವಿಜೃಂಭಣೆಯಿಂದ ಆಚರಿಸಬಹುದು. ಲಾಕ್ಡೌನ್ ವೇಳೆ ಬೆಂಗಳೂರಿನಿಂದ ಗ್ರಾಮಾಂತರ ಪ್ರದೇಶಕ್ಕೆ ತೆರಳುವ ಜನರು ಬಸ್ಸು ನಿಲ್ದಾಣಕ್ಕೆ ಹಿಂಡು ಹಿಂಡಾಗಿ ಓಡಬಹುದು. ಹೇಳುವವರು ಇಲ್ಲ. ಕೇಳುವವರು ಇಲ್ಲ! ಜಮೀರ್ ಅಹಮ್ಮದ್ ಪಾದಪೂಜೆ ಆಗಬಹುದು. ಪರವಾಗಿಲ್ಲ.
ಲಾಕ್ಡೌನ್ ಮಾಡೊಲ್ಲ. ಆರ್ಥಿಕ ವ್ಯವಸ್ಥೆಗೆ ಮಾರಕ ಹೊಡೆತಬೀಳುತ್ತದೆ. ಓರ್ವ ಸಚಿವರ ಮೇಘ ಮಲ್ಲಾರ ರಾಗ! ಕೇವಲ ಹದಿನಾಲ್ಕು ದಿವಸ ಲಾಕ್ ಡೌನ್ ಇನ್ನೊಬ್ಬರ ತೋಡಿ ರಾಗ! ಕೇವಲ ಏಳು ದಿವಸ ಮಗುದೊಬ್ಬರ ದೀಪಕ ರಾಗ! ನಿಮಗೆ ಬುಧವಾರದ ತನಕ ಜೀನಸು- ತರಕಾರೀ ಖರೀದಿಗೆ ಸಮಯ ಕೊಡುತ್ತೇವೆ… ಪ್ಯಾನಿಕ್ ಆಗಬೇಡಿ ಸ್ವಾಮೀ ಇನ್ನೊಬ್ಬರ ಶಿವರಂಜಿನಿ ರಾಗ! ಒಂದು ವಾರದ ಸಾಮಾನು ಖರೀದಿಗೆ ತಗಲುವ ಹಣ ಸಾಮಾನ್ಯ ಪ್ರಜೆಯಲ್ಲಿ ಇದೆಯೇ? ಅದು ಕೂಡ ಈ ಕೊರೊನಾ ವೇಳೆ! ಚಿಂತಿಸಬೇಕಾದ ವಿಚಾರ! ಆದರೆ ಆಡಳಿತ ಶಾಹಿಗೆ ಮಾತ್ರ ಲಾಕ್ ಡೌನ್ ಸರಾಗ! ಮನೆಯಲ್ಲಿ ಕುಳಿತುಕೊಳ್ಳಿ ಆರೋಗ್ಯವಂತರಾಗಿ ಇನ್ನೊಬ್ಬರ ಮಾಲ್ ಕಂಸ್ರಾಗ!
ಆತ್ಮನಿರ್ಭರರಾಗಿ ಕೊರೊನಾದೊಂದಿಗೆ ಬದುಕಲು ಕಲಿಯಿರಿ! ಎಂದು ಪ್ರಧಾನ ಮಂತ್ರಿ ಮೋದಿ ಹೇಳುತ್ತಾರೆ. ರಾಜ್ಯ ಸರಕಾರ ಹೇಳುತ್ತದೆ ಲಾಕ್ ಡೌನ್ ಮಾಡ್ತೇವೆ. ಮನೆಯಲ್ಲಿ ಕುಳಿತುಕೊಳ್ಳಿ ಅಂತ!
ಸ್ವಾಮೀ, ಲಾಕ್ ಡೌನ್ ಮಾಡಿ. ವರುಷದ ೩೬೫ ದಿವಸವೂ ಮಾಡಿ ಹಾಲು ಕೊಳ್ಳಲೋ, ಮದ್ದು ಕೊಳ್ಳಲೋ ಬರುವ ಬಡವನ ಮೇಲೆ ಲಾಠಿ ಬಿಸಿ! ನಿಮಗೆ ಆತ್ಮತೃಪ್ತಿ ಸಿಗುವುದಾದರೆ ಅದನ್ನೂ ಮಾಡಿಬಿಡಿ ಪ್ಲೀಸ್.