“ರಾಜ್ಯ-ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಹಾಕಲು 7 ದಿನಗಳ ಲಾಕ್ ಡೌನ್ ಪ್ರಹಸನ”

ಮಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಹಾಕಲು 7 ದಿನಗಳ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿದೆ ಎಂದು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಆರೋಪಿಸಿದರು.
ಸಿಪಿಐಎಂ ದ.ಕ. ಜಿಲ್ಲಾ ನಿರ್ದೇಶನದಂತೆ ‘ಕೋವಿಡ್ ನಿಗ್ರಹಿಸಲು ಲಾಕ್ ಡೌನ್ ಪರಿಹಾರವಲ್ಲ’ ಎಂಬ ಘೋಷಣೆಯಡಿ ಸಿಪಿಐಎಂ ಉಳ್ಳಾಲ ಸಮಿತಿಯಿಂದ ಬುಧವಾರ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಲಾಕ್ ಡೌನ್ ನಿಂದಾಗಿ ಬಡ ಕಾರ್ಮಿಕರ ಮನೆಯ ದಿನನಿತ್ಯದ ಖರ್ಚನ್ನು ವ್ಯಯಿಸಲು ಸಾಧ್ಯವಿಲ್ಲ, ಇದರಿಂದಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೋವಿಡ್ ಹಾಗೂ ಇತರ ಖಾಯಿಲೆಗಳಿಗೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಸರ್ಕಾರ ವ್ಯವಸ್ಥೆ ಮಾಡಬೇಲಾಗಿದೆ ಎಂದು ಹೇಳಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್ ಮಾತನಾಡಿ, ಲಾಕ್ ಡೌನ್ ಮಾಡುವ ಮೊದಲು ಜನಸಾಮಾನ್ಯರಿಗೆ ಆಹಾರ ಭದ್ರತೆ, ಆರೋಗ್ಯಕ್ಕೆ ಸಿದ್ದತೆ ವ್ಯವಸ್ಥೆ ಮಾಡಬೇಕಾಗಿದೆ. ಆದರೆ ಸರ್ಕಾರ ಇಂಥ ಯಾವುದೇ ಸಿದ್ದತೆ ಮಾಡದ ಕಾರಣ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಜಯಂತ್ ನಾಯಕ್, ಪದ್ಮಾವತಿ ಶೆಟ್ಟಿ, ವಲಯ ಸಮಿತಿ ಸದಸ್ಯರಾದ ವಿಲಾಸಿನಿ ತೊಕ್ಕೊಟ್ಟು, ಮಹಾಬಲ ಟಿ., ಸುಂದರ್ ಕುಂಪಲ, ಜಿಲ್ಲಾ ರೈತ ಸಂಘದ ಪ್ರಮುಖರಾದ ಶೇಖರ್ ಕುಂದರ್, ದಾಮೋದರ್ ಸಾಲಿಯಾನ್, ಜಗನ್ನಾಥ ಕಂಪ, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಪಕ್ಷದ ಸದಸ್ಯರಾದ ಶ್ರೀನಿವಾಸ ಉಳ್ಳಾಲ ಬೈಲ್, ಅರುಣ್ ಕುಮಾರ್, ಕೃಷ್ಣ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.