ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೂತ್ ಮಟ್ಟದ ಕೊರೋನಾ ಕಾರ್ಯಪಡೆಗೆ ಚಾಲನೆ

ಯಲಹಂಕ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಾನು, ನನ್ನ ಕುಟುಂಬ, ನನ್ನ ಬೂತ್ ಧ್ಯೇಯದ ಅಡಿಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಹತ್ತು ಸ್ವಯಂ ಸೇವಕರು ಮತ್ತು ಐದು ಸರ್ಕಾರಿ ನೌಕರರನ್ನು ಒಳಗೊಂಡ ಬೂತ್ ಮಟ್ಟದ ಕೊರೋನಾ ಕಾರ್ಯಪಡೆಗೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್ ಆರ್ ವಿಶ್ವನಾಥ್ ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮದಲ್ಲಿ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿ ಮಾರಕ ಕೊರೋನ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಬೂತ್ ಮಟ್ಟದ ಕೊರೋನ ಕಾರ್ಯಪಡೆ ರಚಿಸಿ ತನ್ಮೂಲಕ ಬೂತ್ ಮಟ್ಟದ ಪ್ರತಿ ಮನೆಗೆ ಭೇಟಿ ನೀಡಿ, ಆರೋಗ್ಯ ತಪಾಸಣೆಯ ಮೂಲಕ ಕೊರೋನ ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಮೂಲಕ ಯಲಹಂಕ ಕ್ಷೇತ್ರದಲ್ಲಿ ಕೊರೋನ ಮಹಾಮಾರಿಯನ್ನು ತಡೆಯುವುದು ಈ ಕಾರ್ಯಪಡೆಯ ಮುಖ್ಯ ಉದ್ದೆಶವಾಗಿದೆ.,
ನಾನು, ನನ್ನ ಕುಟುಂಬ, ನನ್ನ ಬೂತ್ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸಲಿರುವ ಈ ಕಾರ್ಯಪಡೆಯಲ್ಲಿ ಬೂತ್ ಮಟ್ಟದ ವಿವಿಧ ರಾಜಕೀಯ ಪಕ್ಷಗಳ ಸಾಮಾಜಿಕ ಕಳಕಳಿಯುಳ್ಳ ಹತ್ತು ಜನ ಮುಖಂಡರು ಮತ್ತು ಅವರೊಂದಿಗೆ ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಐದು ಜನ ಸೇರಿದಂತೆ ಒಟ್ಟು ಹದಿನೈದು ಜನರ ತಂಡ ಕಾರ್ಯನಿರ್ವಹಿಸಲಿದ್ದು, ಇವರು ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಣೆ, ತಪಾಸಣೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಸಮೀಕ್ಷೆ ನಡೆಸಲಿದ್ದು, ಕೊರೋನ ಸೋಂಕಿತರು ಕಂಡುಬಂದಲ್ಲಿ ಕೂಡಲೇ ಅವರ ಮಾಹಿತಿ ನೀಡುವುದರ ಜೊತೆಗೆ ಅವರ ಸೂಕ್ತ ಚಿಕಿತ್ಸಗೆ ಸಹಕಾರ ನೀಡಲಿದ್ದಾರೆ. ಯಲಹಂಕ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಮತ್ತು ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು 150 ಬೂತ್ ಗಳಲ್ಲಿ ಕೊರೋನ ಕಾರ್ಯಪಡೆಯನ್ನು ರಚಿಸಿದ್ದು, ಇವರಿಗೆ ಅಗತ್ಯವಿರುವ ಕಿಟ್ ಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಉಳಿದ ಭಾಗದಲ್ಲಿಯೂ ಕೊರೋನ ಕಾರ್ಯಪಡೆಯನ್ನು ನಿಯೋಜಿಸಲಿದ್ದೇವೆ. ಯಲಹಂಕ ಕ್ಷೇತ್ರದಲ್ಲಿ ಮಾರಕ ರೋಗ ಕೊರೋನವನ್ನು ತಡೆಗಟ್ಟುವುದು ಮತ್ತು ನಾಗರೀಕರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬುದು ನಮ್ಮ ಮತ್ತು ತಾಲ್ಲೂಕು ಆಡಳಿತದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಯಲಹಂಕ ತಹಶಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ ‘ನಾನು, ನನ್ನ ಕುಟುಂಬ, ನನ್ನ ಬೂತ್ ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೂತ್ ಮಟ್ಟದ ಕೊರೋನ ಕಾರ್ಯಪಡೆಯನ್ಬು ಯಲಹಂಕ ಕ್ಷೇತ್ರದಲ್ಲಿ ರಚಿಸಿ ಕಾರ್ಯನಿರ್ವಹಣೆಗೆ ತೊಡಗಿಸಿರುವುದು ನಿಜಕ್ಕೂ ಒಂದು ಮಾದರಿ ಕಾರ್ಯವಾಗಿದ್ದು, ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯಪಡೆ ರಚಿಸಲಾಗಿದೆ, ಇದರಿಂದ ಕ್ಷೇತ್ರದ ಪ್ರತಿ ಬೂತ್ ನ ಪ್ರತಿ ಮನೆಯಲ್ಲೂ ಕೊರೋನ ಸೋಂಕಿತರನ್ನು ಪತ್ತೆ ಹಚ್ಚಲು ಜೊತೆಗೆ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸಲು ತುಂಬಾ ಸಹಕಾರಿಯಾಗಲಿದೆ. ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಬೂತ್ ಮಟ್ಟದ ಕೊರೋನ ಕಾರ್ಯಪಡೆ ರಾಜ್ಯದಲ್ಲಿಯೇ ಒಂದು ಮೈಲಿಗಲ್ಲಾಗಲಿದ್ದು, ಇತರ ಕ್ಷೇತ್ರಗಳು ಸಹ ಅನುಸರಿಸಬೇಕಾಗಿರುವ ಒಂದು ಮಾದರಿ ಕ್ರಮವಾಗಿದೆ. ಈ ಕಾರ್ಯಕ್ಕೆ ಯಲಹಂಕ ತಾಲ್ಲೂಕು ಆಡಳಿತ ಅಗತ್ಯ ಸಹಕಾರ ನೀಡಲಿದೆ‌ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಯಲಹಂಕ ಗ್ರಾಮೀಣ ಮಂಡಲ ಅಧ್ಯಕ್ಷ ಹೆಚ್ ಬಿ ಹನುಮಯ್ಯ, ಬಿಇಒ ಕಮಲಾಕರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಯಲಹಂಕ ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *