ರಾಜಕೀಯ ಕ್ರಾಂತಿಯ ಕಹಳೆ ಊದಿದ ಡಿಸಿಎಂ ಸಚಿನ್ ಪೈಲಟ್! ರಾಜಸ್ತಾನದಲ್ಲಿ ಬುಗಿಲೆದ್ದ ಭಿನ್ನಮತ

ಜೈಪುರ: ರಾಜಸ್ತಾನದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪದ ನಡುವೆ ರಾಜಸ್ತಾನ ಸರ್ಕಾರದ ರಾಜಕೀಯ ಹೈಡ್ರಾಮ ಅಚ್ಚರಿಯ ರೀತಿಯಲ್ಲಿ ದೆಹಲಿಗೆ ಶಿಫ್ಟ್ ಆಗಿದೆ. ಮೂಲಗಳ ಪ್ರಕಾರ ಅಶೋಕ್ ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ತನ್ನ ಜೊತೆ 25 ಮಂದಿ ಶಾಸಕರನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದು ಸಹಜವಾಗಿಯೇ ರಾಜಸ್ತಾನ ಕಾಂಗ್ರೆಸ್ ಇಬ್ಘಾಗವಾಗುವಂತೆ ಮಾಡಿದೆ ಎಂದು ರಾಜಕೀಯ ಪಂಡಿತರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ಜೊತೆ ಕೂಡ ಸಚಿನ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಬದಲಾಗುತ್ತಿದೆ.
ಸಚಿನ್ ಪೈಲಟ್ 25 ಶಾಸಕರೊಂದಿಗೆ ದೆಹಲಿ ತಲುಪಿದ್ದು, ಈಗಾಗಲೇ ಐಟಿಸಿ ಹೋಟೆಲ್ ಬುಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಶಾಸಕರ ಜೊತೆ ದೆಹಲಿಗೆ ಬಂದಿರುವ ಪೈಲಟ್ ಸರ್ಕಾರವನ್ನು ಉರುಳಿಸಲು ಕರೆದುಕೊಂಡು ಬಂದಿದ್ದಾರಾ ಅಥವಾ ಹೈಕಮಾಂಡ್‍ಗೆ ತನ್ನ ಶಕ್ತಿ ಪ್ರದರ್ಶನ ಮಾಡಿ ಮುಖ್ಯಮಂತ್ರಿ ಪಟ್ಟ ನೀಡಲು ಒತ್ತಡ ಹೇರಲು ಕರೆ ತಂದಿದ್ದಾರಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇಲ್ಲಿಯವರೆಗೆ ತೆರೆ ಮರೆಯಲ್ಲಿ ನಡೆಯುತ್ತಿದ್ದ ನಾಯಕರ ನಡುವಿನ ಗುದ್ದಾಟ ಈಗ ಬಹಿರಂಗವಾಗಿದ್ದು ಬಿಕ್ಕಟ್ಟು ಈಗ ದೆಹಲಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಬಳಿಕ 69 ವರ್ಷದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು 42 ವರ್ಷದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಭಿನ್ನಮತ ಎದ್ದಿತ್ತು. ಆಗ ಹೇಗೂ ಕಾಂಗ್ರೆಸ್ ಹೈಕಮಾಂಡ್ ಭಿನ್ನಮತವನ್ನು ಶಮನ ಮಾಡಲು ಸಚಿನ್ ಪೈಲಟ್‍ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಿತ್ತು. ಆದರೆ ಈಗ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ಪೈಲಟ್ ಅವರು ತಮ್ಮ ಆಪ್ತ 25 ಶಾಸಕರ ಜೊತೆ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ದಿಢೀರ್ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಸಿಎಂ ಗೆಹ್ಲೋಟ್ ತನ್ನ ಮಂತ್ರಿಗಳು, ಆಪ್ತ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ಪತ್ರದ ಮೂಲಕ ಸರ್ಕಾರಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದರು. ಕಾಂಗ್ರೆಸ್ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‍ಒಜಿ) ಪ್ರಕರಣ ದಾಖಲಿಸಿ ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಪೊಲೀಸರು ಸಚಿನ್ ಪೈಲಟ್‍ಗೆ ನೋಟಿಸ್ ಕಳುಹಿಸಿದ್ದರು. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ 25 ಕೋಟಿ ನೀಡುವ ಆಮಿಷ ಒಡ್ಡಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *