ಯೋಗೀಶ್ ಹತ್ಯೆ: ರೌಡಿಶೀಟರ್ ಸೋದರರ ಸಹಿತ ನಾಲ್ವರ ಸೆರೆ

ಉಡುಪಿ: ಮೊನ್ನೆ ರಾತ್ರಿ ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ಎಂಬಲ್ಲಿ ನಡೆದಿದ್ದ ಯೋಗೀಶ್ ಪೂಜಾರಿ(26) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ಸಂತೆಕಟ್ಟೆಯ ರೌಡಿಶೀಟರ್ ಸೋದರರ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಜಿತ್ ಪಿಂಟೋ(37), ರೋಹಿತ್ ಪಿಂಟೋ(43), ಪ್ರದೀಪ್ ಯಾನೆ ಅಣ್ಣು(40), ವಿನಯ(36) ಎಂದು ಹೆಸರಿಸಲಾಗಿದೆ. ಗಿರೀಶ್ ಹಾಗೂ ಅನುಪ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಡ್ಡಿ ಹಣದ ವಿಚಾರಕ್ಕೆ ಸಂಬಂಧಿಸಿ ಜು.6ರ ರಾತ್ರಿ ಸುಜಿತ್ ಪಿಂಟೋ ಮತ್ತಾತನ ಸಹಚರರು ಯೋಗೀಶ್ ಪೂಜಾರಿಗೆ ಚೂರಿಯಿಂದ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳನ್ನು ಕಲ್ಯಾಣಪುರ ಬಳಿ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಕಾರು ಮತ್ತು ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.