ಮೈಸೂರು ಪಾಲಿಕೆ ಸದಸ್ಯೆಯ ಪತಿಯಿಂದ `ಗೂಂಡಾಗಿರಿ’!

ಮೈಸೂರು: ಒಳಚರಂಡಿ ವಿಚಾರಕ್ಕೆ ಸಂಬಂಧಿಸಿ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ನಗರಪಾಲಿಕೆ ಸದಸ್ಯೆ ಶಾರದಾ ಅವರ ಪತಿ ಈಶ್ವರ ಎಂಬವರು ನಮ್ಮ ಮನೆಗೆ ಬಂದು ಗೂಂಡಾಗಿರಿ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೆ.ಪಿ.ನಗರದ ನಿವಾಸಿ ಬಿ.ಎನ್.ದಾಕ್ಷಾಯಿಣಿ ದೂರು ನೀಡಿದ್ದು ಯುಜಿಡಿ ಕೆಲಸ ನಡೆಯುತ್ತಿದ್ದಾಗ ನಮ್ಮ ಮನೆಗೆ ಸಂಪರ್ಕಗೊಂಡಿರುವ ಎಲೆಕ್ಟ್ರಿಕಲ್ ಕೇಬಲ್ ಡ್ಯಾಮೇಜ್ ಆಗಿದೆ. ಈ ವಿಚಾರವಾಗಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೆ ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸಲು ಮುಂದಾದರು. ಮನೆ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮೊಡನೆ ಗೂಂಡಾವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಲಾಟೆಗೆ ಸಂಬಂಧಿಸಿದ ವಿಡಿಯೊವನ್ನು ಚಿತ್ರೀಕರಿಸಿ ಪೊಲೀಸ್ ಠಾಣೆಗೆ ಒದಗಿಸಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.