ಮೃತ ಪೊಲೀಸ್ ಅಧಿಕಾರಿಯ ಅಂಗೈಯಲ್ಲಿ ದುಷ್ಕರ್ಮಿಗಳ ಸುಳಿವು!

ಹರ್ಯಾಣ: ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹರಿತವಾದ ಆಯುಧಗಳಿಂದ ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗುವ ಮುನ್ನ ಆರೋಪಿಗಳ ಕಾರ್‍ನ ನಂಬರ್‍ನ್ನು ತನ್ನ ಅಂಗೈಯಲ್ಲಿ ಬರೆದುಕೊಂಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ನೆರವಾಗಿತ್ತು.
ಕಳೆದ ವಾರ ಜಿಂದ್ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳಾದ ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಕೊರೊನಾ ವೈರಸ್ ಭೀತಿಯ ನಡುವೆಯೂ ಬುಟಾನಾ ಪೊಲೀಸ್ ಠಾಣೆ ಬಳಿಯ ಸೋನಿಪತ್-ಜಿಂದ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಕೆಲ ಪುಂಡರು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದವರನ್ನು ವಿಚಾರಿಸಿದ್ದರು. ಆಗ ಕುಡಿತದ ಅಮಲಿನಲ್ಲಿದ್ದ ಪುಂಡರು ಹರಿತವಾದ ಅಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ, ಕೊಂದು ಹಾಕಿದ್ದರು. ಆದರೆ ಪ್ರಕರಣದ ಬಗ್ಗೆ ಯಾವ ಸುಳಿವೂ ಕೂಡ ಸಿಕ್ಕಿರಲಿಲ್ಲ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆ ರವೀಂದರ್ ಸಿಂಗ್, ಸಾಯುವ ಮುನ್ನ ಆರೋಪಿಗಳ ಕಾರಿನ ನಂಬರ್ ಅನ್ನು ತನ್ನ ಅಂಗೈ ಮೇಲೆ ಬರೆದುಕೊಂಡಿದ್ದರು. ಈ ಸಂಖ್ಯೆ ರವೀಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವಾಗ ವೈದ್ಯರಿಗೆ ಸಿಕ್ಕಿದೆ. ನಂತರ ಈ ಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಹರ್ಯಾಣದ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್, ನಮ್ಮ ಅಧಿಕಾರಿಗಳನ್ನು ಕೊಂದ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಸಾಯುವ ಮುನ್ನವು ತನ್ನ ಪೊಲೀಸ್ ಕೌಶಲ್ಯವನ್ನು ತೋರಿಸಿರುವ ನಮ್ಮ ಧೈರ್ಯಶಾಲಿ ಪೇದೆ ರವೀಂದರ್ ಸಿಂಗ್, ಆರೋಪಿಗಳ ಕಾರಿನ ನಂಬರ್ ಅನ್ನು ತಮ್ಮ ಅಂಗೈಯಲ್ಲಿ ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ನಮಗೆ ಈ ನಂಬರ್ ಸಿಕ್ಕಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಜಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡು ಡ್ರಿಂಕ್ಸ್ ಮಾಡಬೇಡಿ ಎಂದು ಬುದ್ಧಿ ಹೇಳಲು ಹೋದ ಪೊಲೀಸರನ್ನು, ಎಣ್ಣೆಯ ನಶೆಯಲ್ಲಿ ಪುಂಡರು ಚುಚ್ಚಿ ಸಾಯಿಸಿದ್ದರು. ಸಾಯುವ ವೇಳೆಯಲ್ಲೂ ತನ್ನ ಕರ್ತವ್ಯ ಮಾಡಿ ಪ್ರಾಣ ಬಿಟ್ಟ ಪೇದೆ ರವೀಂದರ್ ಸಿಂಗ್ ಅವರಿಗೆ ಮರಣ ನಂತರದ ಪೊಲೀಸ್ ಪದಕ ಕೊಡಲಾಗುವುದು ಎಂದು ಮನೋಜ್ ಯಾದವ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *