ಮೂಲ್ಕಿ: ಹಿಂದೂ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕ!

ಮಂಗಳೂರು: ಅನಾಥಾಶ್ರಮದಲ್ಲಿ ಕೆಲವು ವರ್ಷಗಳಿಂದ ವಾಸವಿದ್ದ ಹಿಂದೂ ವಯೋವೃದ್ಧರು ಸಾವನ್ನಪ್ಪಿದ್ದು ಕುಟುಂಬಸ್ಥರು ಕೊರೊನಾ ಭಯದಿಂದಾಗಿ ಅವರ ಅಂತ್ಯಕ್ರಿಯೆ ನೆರವೇರಿಸಲು ಬಾರದೇ ಇದ್ದ ಕಾರಣ ಮುಸ್ಲಿಂ ಯುವಕನೋರ್ವ ಹಿಂದೂ ಧರ್ಮದ ವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಪಡುಬಿದ್ರಿ ನಿವಾಸಿ ವೇಣುಗೋಪಾಲ ರಾವ್(62) ಮೃತಪಟ್ಟವರು.
ಘಟನೆಯ ವಿವರ:
ವೇಣುಗೋಪಾಲ ಅವರು ನಿನ್ನೆ ಅನಾಥಾಶ್ರಮದಲ್ಲಿ ಮೃತಪಟ್ಟಿದ್ದು ಇವರ ಸಾವಿನ ಸುದ್ದಿ ತಿಳಿದರೂ ಕುಟುಂಬಿಕರು ಬಂದಿರಲಿಲ್ಲ. ಮನೆಮಂದಿ, ಕುಟುಂಬಿಕರು ಎಲ್ಲರಿದ್ದೂ ಅನಾಥರಾಗಿ ಸಾವನ್ನಪ್ಪಿದ ವೃದ್ಧರ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸುವುದಾಗಿ ಆಂಬ್ಯುಲೆನ್ಸ್ ಚಾಲಕ ಮುಹಮ್ಮದ್ ಆಸಿಫ್ ಮುಂದೆ ಬಂದಿದ್ದರು. ಮೂಲ್ಕಿ ಠಾಣಾ ಪೆÇಲೀಸರ ಅನುಮತಿ ಪಡೆದು ಸ್ನೇಹಿತರ ಜೊತೆಗೂಡಿ ಮುಲ್ಕಿಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮುಹಮ್ಮದ್ ಆಸಿಫ್ ಅವರು ಕಾರ್ನಾಡಿನ ಮೈಮುನಾ ಫೌಂಡೇಶನ್ ನಿರ್ದೇಶಕರಾಗಿದ್ದಾರೆ. ಮಾನಸಿಕ ಖಿನ್ನತೆಗೊಳಗಾದವರಿಗೆ ಆಶ್ರಯ ನೀಡುತ್ತಿರುವ ಇವರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
