ಮೂಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಬಜ್ಪೆ ಸ್ವಯಂಪ್ರೇರಿತ ಲಾಕ್ ಡೌನ್! ಸುರತ್ಕಲ್ ಮಾತ್ರ ಓಪನ್!!

ಮಂಗಳೂರು: ಕೊರೊನಾ ಮಹಾಮಾರಿ ನಿಯಂತ್ರಿಸಲು ರಾಜ್ಯ ಸರ್ಕಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5ಯವರೆಗೆ ಕಫ್ರ್ಯೂ ವಿಧಿಸಿದೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಳೆದೊಂದು ವಾರದಿಂದ ತೀರಾ ಏರಿಕೆಯಾಗಿದ್ದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಕೆಲವೊಂದು ಪಟ್ಟಣಗಳು ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಕರೆ ನೀಡಿದ್ದು ಬಹುತೇಕ ಯಶಸ್ವಿಯಾಗಿವೆ. ಆದರೆ ಕೊರೊನಾ ಆತಂಕ ಹೆಚ್ಚಿರುವ ಕೆಲವು ಕಡೆಗಳಲ್ಲಿ ಮಾತ್ರ ಯಾವುದೇ ಸ್ವಯಂಪ್ರೇರಿತ ಲಾಕ್ ಡೌನ್ ಗೆ ವರ್ತಕರು ಸಿದ್ಧರಾಗಿಲ್ಲದೇ ಇರುವುದು ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವರ್ತಕರು, ಉದ್ಯಮಿಗಳು ನಿನ್ನೆಯಿಂದ ಜು.22ರವರೆಗೆ ಮಧ್ಯಾಹ್ನ 2 ಗಂಟೆಯಿಂದ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಉಳ್ಳಾಲ ವ್ಯಾಪ್ತಿಯಲ್ಲೂ ಸ್ವಯಂಪ್ರೇರಿತ ಲಾಕ್ ಡೌನ್ ಮುಂದುವರಿದಿದೆ. ಮೂಲ್ಕಿ-ಕಾರ್ನಾಡು ಭಾಗದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ನಡೆಯುತ್ತಿದೆ. ಕಿನ್ನಿಗೋಳಿಯಲ್ಲೂ ಸಮಾನ ಮನಸ್ಕರ ಸಭೆಯಲ್ಲಿ ಜು.11ರವರೆಗೆ ಅಪರಾಹ್ನ 2 ಗಂಟೆಯಿಂದ ಮರುದಿನ 6 ತನಕ ನಿರ್ಣಯದಂತೆ ನಿನ್ನೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಮೂಡಬಿದಿರೆ, ಉರ್ವ, ಪಕ್ಷಿಕೆರೆಯಲ್ಲಿಯೂ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ. ಆದರೆ ಸುರತ್ಕಲ್ ನಲ್ಲಿ ಮಾತ್ರ ಯಥಾಸ್ಥಿತಿ ಮುಂದುವರಿದಿದೆ. ಸಮೀಪದ ಎಂಆರ್ ಪಿಎಲ್ ನಲ್ಲಿ ಸಿಆರ್ ಪಿಎಫ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಸುರತ್ಕಲ್ ಪೇಟೆಯಲ್ಲೂ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಡ್ಯಾ ನಿವಾಸಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಇಷ್ಟೆಲ್ಲ ಆದರೂ ಸುರತ್ಕಲ್ ನಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಸಂಘಟನೆಗಳು, ಟ್ಯಾಕ್ಸಿ-ರಿಕ್ಷಾ ಚಾಲಕರು, ವರ್ತಕರು ಸಿದ್ಧರಿಲ್ಲ. ಇದರಿಂದ ಜನರು ಭಯದಿಂದಲೇ ಓಡಾಡುವಂತಾಗಿದೆ. ಆದಿತ್ಯವಾರದ ಲಾಕ್ ಡೌನ್ ಗೂ ಕೆಲವರು ಹಿಂದೆ ಮುಂದೆ ನೋಡುತ್ತಿದ್ದು ಕಳೆದ ಆದಿತ್ಯವಾರ ಇಲ್ಲಿನ ಮೋರ್ ಸೂಪರ್ ಮಾರ್ಕೆಟ್ ತೆರೆದುಕೊಂಡಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಅಂತರ ಮರೆತು ನೆರೆದಿದ್ದ ಘಟನೆಯೂ ನಡೆದಿತ್ತು. ಕೊನೆಗೆ ಸಾರ್ವಜನಿಕರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವಷ್ಟೇ ಪೊಲೀಸರು ಸ್ಥಳಕ್ಕೆ ತೆರಳಿ ಬಾಗಿಲು ಮುಚ್ಚಿಸಿ ಮೆನೇಜರ್ ಸಹಿತ ನೌಕರರನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದರು. ಕೊರೊನಾ ಮಹಾಮಾರಿ ವಕ್ಕರಿಸಿರುವ ಸುರತ್ಕಲ್ ಪೇಟೆಯಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಜನರು ಯಾಕೆ ಮನಸ್ಸು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *