ಮೂರ್ಛೆ ತಪ್ಪಿ ತಾಳೆಮರದಲ್ಲೇ ಸಿಲುಕಿದ ವ್ಯಕ್ತಿ: ರಕ್ಷಿಸಿದ ಯುವಕನಿಗೆ ವ್ಯಾಪಕ ಪ್ರಶಂಸೆ!

ಮಂಗಳೂರು: ನಿನ್ನೆ ತಾಳೆಮರದಿಂದ ಶೇಂದಿ ತೆಗೆಯಲು ಹೋಗಿದ್ದ ವೇಳೆ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಮರದಲ್ಲೇ ಎರಡು ಗಂಟೆಗಳ ಕಾಲ ಬಾಕಿಯಾದ ಘಟನೆ ಕಡಂದಲೆ ಬಳಿ ನಡೆದಿದ್ದು ಈ ವೇಳೆ ಸ್ಥಳೀಯ ಯುವಕ ಸುಧಾಕರ್ ಸಾಲ್ಯಾನ್ ಏಳಿಂಜೆ ಅವರು ಮರಕ್ಕೆ ಹತ್ತಿ ರಕ್ಷಣೆ ಮಾಡಿದ್ದು ಅವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸುಧಾಕರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಯುವನಾಯಕ ಮಿಥುನ ರೈ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನಿನ್ನೆ ಮುಂಜಾನೆ 6:30ರ ವೇಳೆಗೆ ಕಡಂದಲೆ ಸಂತೋಷ್ ಎಂಬವರು ಶೇಂದಿ ತೆಗೆಯಲೆಂದು ತಾಳೆ ಮರವನ್ನು ಏರಿದ್ದು ಈ ವೇಳೆ ತಾಳೆಮರದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಮೂರ್ಛೆ ಹೋಗಿದ್ದ ಸಂತೋಷ್ ತಾಳೆ ಮರದಲ್ಲಿ ಸಿಲುಕಿದ್ದ ಸಂದರ್ಭ ಜನರೆಲ್ಲ ತಾಳೆಮರವನ್ನೇ ನೋಡುತ್ತಿದ್ದರು. ಅಷ್ಟರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಐಕಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ “ವಿಜಯ ಕಲಾವಿದರು” ತಂಡದ ಕಲಾವಿದ ಸುಧಾಕರ ಸಾಲಿಯಾನ್ ಬಂದಿದ್ದು ಜನ ಸೇರಿದ್ದನ್ನು ಕೂಡಲೇ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ.
ಅಗ್ನಿಶಾಮಕ ದಳ ಬಂದೊಡನೆ ಅವರೊಂದಿಗೆ ಸೇರಿ ಸಂತೋಷ್ ಜೀವ ಉಳಿಸಲು ಹರಸಾಹಸ ಪಟ್ಟು ತಾಳೆಮರ ಹತ್ತಿ ಅವರನ್ನು ಕೆಳಗಿಳಿಸಿ ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಸಾಗಿಸಲು ಕೊಂಡು ಹೋಗುವ ಸಂದರ್ಭದಲ್ಲಿ ಮೂರ್ಛೆ ತಪ್ಪಿದ ಸಂತೋಷ್ ಎಚ್ಚರಗೊಂಡಿದ್ದಾರೆ. ಪ್ರಾಣ ಕಾಪಾಡಿದ ಸುಧಾಕರ್ ಸಾಹಸಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.

Leave a Reply

Your email address will not be published. Required fields are marked *