ಮಾಸ್ಕ್ ಧರಿಸದ ಪ್ರಯಾಣಿಕರಿಗೆ `ದುರ್ಗಾಂಬ’ ಬಸ್ಸಲ್ಲಿ ಕ್ಲಾಸ್!

ಉಡುಪಿ: ಮಾಸ್ಕ್ ಧರಿಸದೇ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಿನ್ನೆ ದುರ್ಗಾಂಬ ಬಸ್ಸಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕುಂದಾಪುರದಿಂದ ಉಡುಪಿಗೆ ಸಾಗುವ ದುರ್ಗಾಂಬ ಬಸ್ಸಲ್ಲಿ ಮಾಸ್ಕ್ ಧರಿಸದೇ ಇಬ್ಬರು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಇದನ್ನು ಬಸ್ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ. ಈ ವೇಳೆ ಮಾಸ್ಕ್ ಹಾಕದವರು ಬೆದರಿಕೆ ಹಾಕಿದ್ದು ಬಸ್ ಸಿಬ್ಬಂದಿ ಪ್ರಯಾಣಿಕರ ಬೆಂಬಲಕ್ಕೆ ನಿಂತು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ಹೇಳಿದ್ದಾರೆ. ಕೊನೆಗೆ ಪ್ರಯಾಣಿಕರು ಮಾಸ್ಕ್ ಧರಿಸಲು ಒಪ್ಪದ ಕಾರಣ ಇಬ್ಬರನ್ನೂ ಕೆಳಗಿಳಿಸಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಕುಂದಾಪುರ ಸಮೀಪ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಪ್ರಯಾಣಿಕರ ಹೆಚ್ಚಿನ ಮಾಹಿತಿ ಲಭಿಸಿಲ್ಲ.
