ಮಧ್ಯರಾತ್ರಿ ರಿಕ್ಷಾ ಚಲಾಯಿಸಿ ಗರ್ಭಿಣಿಯನ್ನು ಆಸ್ಪತ್ರೆ ಸೇರಿಸಿದ ಆಶಾ ಕಾರ್ಯಕರ್ತೆ!

ಉಡುಪಿ: ಪೆರ್ಣಂಕಿಲ ನಿವಾಸಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ತಾವೇ ರಿಕ್ಷಾ ಚಲಾಯಿಸಿದ ಆಶಾ ಕಾರ್ಯಕರ್ತೆಯೊಬ್ಬರು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಸುಸೂತ್ರವಾಗಿ ಹೆರಿಗೆಯಾಗುವಂತೆ ನೋಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಆಶಾ ಕಾರ್ಯಕರ್ತೆಯ ಕಾರ್ಯಕ್ಕೆ ಸಾರ್ವಜನಿಕರು ಶಹಬ್ಬಾಸ್ ಗಿರಿ ನೀಡಿದ್ದಾರೆ.
ಆಶಾ ಕಾರ್ಯಕರ್ತೆ ರಾಜೀವಿ ಅವರಿಗೆ ಮಧ್ಯರಾತ್ರಿಯ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬವರು ಕರೆ ಮಾಡಿ ಹೆರಿಗೆ ನೋವು ಹೆಚ್ಚಿರುವ ವಿಷಯ ತಿಳಿಸಿದ್ದಾರೆ. ರಾಜೀವಿ ತಮ್ಮ ರಿಕ್ಷಾದಲ್ಲಿ ಗರ್ಭಿಣಿಯನ್ನು ಪೆರ್ಣಂಕಿಲದಿಂದ ಕರೆದೊಯ್ದು ಉಡುಪಿಯ ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರುದಿನನ ಶ್ರೀಲತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಜೀವಿ ಮೂಲತ: ಸುಳ್ಯದವರಾಗಿದ್ದು ಮದುವೆಯಾದ ಬಳಿಕ ಪೆರ್ಣಂಕಿಲದಲ್ಲಿ ವಾಸಿಸುತ್ತಿದ್ದಾರೆ. ಇವರು ಗರ್ಭಿಣಿಯರಿಗೆ 24 ಗಂಟೆಗಳ ಕಾಲ ಉಚಿತ ಸೇವೆಯನ್ನು ರಿಕ್ಷಾ ಮೂಲಕ ಒದಗಿಸುತ್ತಿದ್ದಾರೆ. ಬೆಳಗ್ಗೆ ಆಶಾ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದು ಮಧ್ಯಾಹ್ನದ ಬಳಿಕ ರಿಕ್ಷಾ ಓಡಿಸುತ್ತಿದ್ದಾರೆ.