ಮತ್ತೊಮ್ಮೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮುಂದಾದ ವ್ಯಾಪಾರಿಗಳು! ಕಟ್ಟಡ ಶಿಥಿಲವಾಗಿಲ್ಲ, ವ್ಯಾಪಾರಕ್ಕೆ ತೊಂದರೆಯಿಲ್ಲ ಎಂದ ಕೋರ್ಟ್!

ಮಂಗಳೂರು: ಕೇಂದ್ರ ಮಾರುಕಟ್ಟೆ ತೆರವಿಗೆ ಸೂಕ್ತ ಕಾರಣ ನೀಡಲು ಮನಪಾ ವಿಫಲವಾಗಿದೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಲು ಮಾಡಲು ನ್ಯಾಯಾಲಯ ಅನುಮತಿ ನೀಡಿದ್ದು, ಬುಧವಾರದಿಂದ ಮತ್ತೆ ತಮ್ಮ ಅಂಗಡಿಗಳನ್ನು ತೆರೆಯಲು ವ್ಯಾಪಾರಿಗಳು ಮುಂದಾಗಿದ್ದಾರೆ.‌
ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಸಂದರ್ಭ ಸುರಕ್ಷಿತ ಅಂತರದ ಹೆಸರಲ್ಲಿ ಕೇಂದ್ರ ಮಾರುಕಟ್ಟೆಯ ರಖಂ ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ ಹೇರಿ ಚಿಲ್ಲರೆ ವ್ಯಾಪಾರಿಗಳ ಪ್ರವೇಶವನ್ನು ತಡೆದು, ಸ್ಮಾರ್ಟ್ ಸಿಟಿಗಾಗಿ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣದ ನೆಪವನ್ನು ಮನಪಾ ಅಧಿಕಾರಿಗಳು ನೀಡಿದ್ದರು. ಇದನ್ನು ಪ್ರಶ್ನಿಸಿ ಹಲವು ವ್ಯಾಪಾರಿಗಳು ಹೈಕೋರ್ಟ್ ಮೆಟ್ಟಿಲೇರಿ ಗೆಲುವು ಸಾಧಿಸಿದರೂ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮನಪಾ ಅವಕಾಶವನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ವ್ಯಾಪಾರಿಗಳು ಕಳೆದ ತಿಂಗಳು ಮಾರುಕಟ್ಟೆಯಲ್ಲಿರುವ ತಮ್ಮ ಅಂಗಡಿಗಳನ್ನು ತೆರೆಯಲು ಮುಂದಾದಾಗ ಪೊಲೀಸರು ತಡೆಯೊಡ್ಡಿದ್ದರು.
ಇದನ್ನು ಪ್ರಶ್ನಿಸಿ ವ್ಯಾಪಾರಿಗಳಾದ ಗಣೇಶ್ ಆಂಚನ್ ಮತ್ತು ಶಿವಪ್ಪ ಎಂಬವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಮೊನ್ನೆ ವಿಚಾರಣೆಗೆ ಬಂದಿದೆ. ನ್ಯಾಯವಾದಿ ಬಿ.ಆರ್.ರವಿಶಂಕರ್ ಅರ್ಜಿದಾರರ‌ ಪರ ವಾದಿಸಿದ್ದರು.
ಈ ಬಾರಿ ಸ್ಮಾರ್ಟ್ ಸಿಟಿಯ ವಾದ ಕೈಬಿಟ್ಟ ಮನಪಾ, ಮಾರುಕಟ್ಟೆಯ‌ ಕಟ್ಟಡ ಶಿಥಿಲವಾದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಅನಿವಾರ್ಯ ಎನ್ನುವ ಪ್ರಸ್ತಾಪ ನ್ಯಾಯಾಲಯದ ಮುಂದಿಟ್ಟಿತ್ತು. ಈ ಬಗ್ಗೆ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಪಿ.ಬಿ.ಭಜಂತ್ರಿ, ಮಾರುಕಟ್ಟೆ ಇರುವ ಪ್ರದೇಶ ಕರಾವಳಿ ಭಾಗ ಆಗಿರುವುದರಿಂದ ಹಳೆಯದಾಗಿ ಮಣ್ಣು ಹಿಡಿದಂತಾಗಿದೆ. ಅದು ಬಿಟ್ಟರೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿಲ್ಲ. ಇಲ್ಲಿ ವ್ಯಾಪಾರಕ್ಕೆ ಯಾವುದೇ ಅಡ್ಡಿಯಿಲ್ಲ. ಒಂದು ವೇಳೆ ಇದಕ್ಕೆ ಅವಕಾಶ ನೀಡದಿದ್ದಲ್ಲಿ ನ್ಯಾಯಾಲಯ ನಿಂದನೆ ದಾವೆ ಹೂಡಬಹುದು ಎಂದು ತಿಳಿಸಿದ್ದಾರೆ. ಇದರಿಂದ ಗೆಲುವಿನ ನಗೆ ಬೀರಿರುವ ವ್ಯಾಪಾರಿಗಳು ಬುಧವಾರದಿಂದ ಮತ್ತೆ ತಮ್ಮ ಅಂಗಡಿಗಳನ್ನು ತೆರೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.

Leave a Reply

Your email address will not be published. Required fields are marked *