ಮಣಿಪಾಲ: ಬಾಲಕಿಯ ಅತ್ಯಾಚಾರಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲಾಡ್ಜ್ ನಲ್ಲಿ ಗ್ಯಾಂಗ್ ರೇಪ್ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಉಡುಪಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 60 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಯ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ಗ್ಲೆನ್ ಜೆಫ್ರಿ ಮಥಾಯಸ್ ಹಾಗೂ ಸುಹೇಲ್ ಎಂ. ಎಂಬವರನ್ನು ಬಂಧಿಸಿದ್ದರು.
ಘಟನೆಯ ವಿವರ:
2017ರ ಜೂ.29ರಂದು ಘಟನೆ ನಡೆದಿದ್ದು ಆರೋಪಿಗಳು ಬಾಲಕಿಯನ್ನು ಮಣಿಪಾಲದ ಸಿಂಡಿಕೇಟ್ ಸರ್ಕಲ್‍ಗೆ ಬರಹೇಳಿದ್ದು ಅಲ್ಲಿಂದ ವಿಹಾರಕ್ಕೆಂದು ಅರ್ಬಿ ಫಾಲ್ಸ್ ಗೆ ಕರೆದೊಯ್ದು ಬಲವಂತವಾಗಿ ಮದ್ಯಪಾನ ಮಾಡಿಸಿದ್ದರು. ಬಳಿಕ ಸಂಜೆ ಆಕೆಯನ್ನು ಮಣಿಪಾಲದ ಲಾಡ್ಜ್ ಗೆ ಕರೆದೊಯ್ದು ಅಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯ ಆಗಿನ ವೃತ್ತ ನಿರೀಕ್ಷಕ ಸುದರ್ಶನ್ ಎಂ. ಆರೋಪಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಯಾದವ ವನಮಾಲ ಆನಂದರಾವ್ ಅವರು ಅಭಿಯೋಜನೆ ಪರವಾಗಿ ಹಾಜರು ಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಉಡುಪಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕರಾದ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Leave a Reply

Your email address will not be published. Required fields are marked *