ಮಂಜನಾಡಿ ಭೂಮಾಫಿಯಾ: ವಿ.ಎ. ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಮಂಗಳೂರು: ಮಂಜನಾಡಿ ಗ್ರಾಮದ ನಾಟೆಕಲ್ ಎಂಬಲ್ಲಿರುವ ವಿಶಾಲವಾದ ಎಕರೆಗಟ್ಟಲೆ ಸರ್ಕಾರಿ ಜಮೀನನನ್ನು ಭೂಮಾಫಿಯಾಗಾರರಿಂದ ಮಾರಾಟಕ್ಕೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಜಮೀನಿನ ಬಗ್ಗೆ ನಿರ್ಲಕ್ಷ್ಯ ತಾಳಿರುವ ಗ್ರಾಮಕರಣಿಕರ ವಿರುದ್ಧ ಲಂಚದ ಆರೋಪ ಹೊರಿಸಲಾಗಿದೆ.
ಮಂಜನಾಡಿ ಗ್ರಾಮದ ನಾಟೆಕಲ್ ಸಮೀಪದ ಉರುಮಣೆ ಎಂಬಲ್ಲಿರುವ ಸರ್ವೇ ನಂಬ್ರ 115ರಲ್ಲಿ 6.06 ಎಕರೆ ಮತ್ತು ಸರ್ವೇ ನಂಬ್ರ 117ರಲ್ಲಿ 5.84 ಎಕರೆ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ಕಳೆದ ಕೆಲವು ಸಮಯಗಳಿಂದ ಭೂಮಾಫಿಯಾಗಾರರು ಸಮತಟ್ಟುಗೊಳಿಸಿ ಮಾರಾಟ ಮಾಡುವ ಸಂಚು ರೂಪಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಿಂದೊಮ್ಮೆಯೂ ಸ್ಥಳೀಯ ಉದ್ಯಮಿಗಳು ಈ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಸ್ಥಳೀಯರು ನೀಡಿದ ದೂರಿನಂತೆ ಮಂಗಳೂರು ಸಹಾಯಕ ಆಯುಕ್ತರು ಪ್ರಕರಣ ದಾಖಲಿಸಿದ್ದು, ಆ ಪ್ರಕರಣ ಇಂದಿಗೂ ಬಾಕಿಯಾಗಿದೆ ಎಂದು ಹೇಳಲಾಗಿದೆ.
ಆದರೆ ಇದೀಗ ಕೆಲವು ದಿನಗಳಿಂದ ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಮಾರಾಟ ಮಾಡುವ ನಿಟ್ಟಿನಲ್ಲಿ ಮತ್ತೆ ಸಮತಟ್ಟುಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು ಈಗಾಗಲೇ ಸರ್ವೇ ನಂಬ್ರ 115ರಲ್ಲಿ ಸಂಪೂರ್ಣವಾಗಿ ಸಮತಟ್ಟುಗೊಳಿಸಿ, ಸರ್ವೇ ನಂಬ್ರ 117ರಲ್ಲೂ ಕೆಲಸ ಆರಂಭಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್‍ಗೆ ವರದಿ ನೀಡಬೇಕಿದ್ದ ಗ್ರಾಮಕರಣಿಕರು ನಿರ್ಲಕ್ಷ್ಯ ವಹಿಸಿ ಖಾಸಗಿ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಅವರು ಖಾಸಗಿ ವ್ಯಕ್ತಿಗಳಿಂದ ಐದು ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಜಮೀನು ಭಾರೀ ಮೊತ್ತದ್ದಾಗಿರುವುದರಿಂದ ಖಾಸಗಿ ವ್ಯಕ್ತಿಗಳ ಪಾಲಾದರೆ ಸರ್ಕಾರಕ್ಕೆ ಭಾರೀ ನಷ್ಟವುಂಟಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜಮೀನನ್ನು ಸರ್ಕಾರಕ್ಕೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮ ಕರಣಿಕರ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಹರೀಶ್ ಬಟ್ಯಡ್ಕ ಎಂಬವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *