ಮಂಗಳೂರು: ಮೀನೂಟದ ಹೋಟೆಲ್ ಗಳೂ “ಸೀಲ್ ಡೌನ್”! ಆತಂಕದ ಮಧ್ಯೆ ಜನರ ಬದುಕು…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯವರೆಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 749, ಗುಣಮುಖರಾಗಿ ಮನೆಗೆ ತೆರಳಿದವರು 443 ಮಂದಿಯಾದರೆ ಒಟ್ಟು ಮೃತರ ಸಂಖ್ಯೆ 16. ಜಿಲ್ಲೆಯ ಹೆಚ್ಚಿನ ತಾಲೂಕುಗಳಲ್ಲಿ ಕೊರೋನಾ ತನ್ನ ಕಬಂಧ ಬಾಹುವನ್ನು ಚಾಚಿದೆ.

ಸುಳ್ಯ, ಪುತ್ತೂರು, ಉಳ್ಳಾಲ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ, ಮೂಲ್ಕಿ, ಸುರತ್ಕಲ್, ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶ ಇಲ್ಲೆಲ್ಲಾ ಕೊರೋನಾ ಆರ್ಭಟ ಹೆಚ್ಚುತ್ತಿದೆ. ಉಳ್ಳಾಲ ಒಂದರಲ್ಲೇ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲೂ ಕೊರೋನಾ ದೃಢಪಟ್ಟಿದೆ. ಅಲ್ಲಲ್ಲಿ ಸೀಲ್ ಡೌನ್ ಆಗಿದ್ದು ಜನರು ಭಯಗ್ರಸ್ಥ ವಾತಾವರಣದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ.


ಮಂಗಳೂರಿನ ಖಾಸಗಿ, ಸರಕಾರಿ ಆಸ್ಪತ್ರೆಗಳ 10 ವೈದ್ಯರಲ್ಲಿ ನಿನ್ನೆ ಸೋಂಕು ದೃಢಪಟ್ಟಿದೆ. ಪ್ರಮುಖ ಮೀನಿನ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಸೀಲ್ ಡೌನ್ ಆಗಿವೆ. ಜನರು ಎಲ್ಲಿ ಹೋಗುವುದು ಎಲ್ಲಿ ಬರುವುದು ಎಂದು ತೋಚದೆ ಗಾಬರಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಪ್ರಕರಣ ಹೆಚ್ಚಿದಂತೆ ಮುಂದೊಂದು ದಿನ ಆಸ್ಪತ್ರೆಗಳಲ್ಲೂ ಬೆಡ್ ಸಾಲದೇ ಇರಬಹುದು. ಇದಕ್ಕೆ ಪೂರ್ವ ತಯಾರಿ ಸರಕಾರ, ಜಿಲ್ಲಾಡಳಿತ ಇನ್ನೂ ಮಾಡಿಲ್ಲ. ಹಿಂದೆ ದಿನಕ್ಕೆ ಬೆರಳೆಣಿಕೆಯ ಸೋಂಕು ಪ್ರಕರಣ ವರದಿಯಾಗುತ್ತಿದ್ದರೆ ಇಂದು ಒಂದೇ ದಿನ ನೂರರಷ್ಟು ಪ್ರಕರಣ ದಾಖಲಾಗುವ ಸಮೀಪದಲ್ಲಿದೆ.

ಹೀಗೆಯೇ ಆದರೆ ಜಿಲ್ಲೆಯ ಪರಿಸ್ಥಿತಿ ಮುಂದಿನ ದಿನಗಳಲ್ಲಿ ತೀರಾ ಬಿಗಡಾಯಿಸಲಿದೆ ಅನ್ನೋದಂತೂ ಸ್ಪಷ್ಟ.
ಜನರು ಭಯಬೀಳಲು ಇನ್ನೊಂದು ಕಾರಣವಿದೆ. ಅದೇನೆಂದರೆ ವರದಿಯಾಗುವ ಪ್ರಕರಣಗಳಿಗೆ ಮೂಲ ಪತ್ತೆಯಾಗದೇ ಇರುವುದು. ಹೊಸ ಪ್ರಕರಣಗಳು ಎಲ್ಲಿಂದ ಬರುತ್ತವೆ. ಅನ್ನೋದು ಇನ್ನೂ ದೃಢಪಟ್ಟಿಲ್ಲ. ಕಳೆದೆರಡು ವಾರಗಳಿಂದ ಇಂತಹ ಪ್ರಕರಣಗಳೇ ಹೆಚ್ಚುತ್ತಿರುವುದು ಜನಸಾಮಾನ್ಯರಲ್ಲಿ ಭಯ ಹೆಚ್ಚಿಸಿದೆ. ಕೊರೋನಾ ಅನ್ ಲಾಕ್ ಅವಧಿಯ ಸರಕಾರದ ಗೈಡ್ ಲೈನ್ ಸರಿಯಿಲ್ಲ, ಇದರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಅಂತ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *