ಮಂಗಳೂರಿನ ಎಸ್‌ಇಝಡ್ ಒಳಗಡೆ ದುಡಿಯುತ್ತಿರುವ ಕಾರ್ಮಿಕರಿಗೆ ಸಂಬಳ ಸಹಿತ ಸೂಕ್ತ ಸೌಲಭ್ಯ ಒದಗಿಸದಿದ್ದರೆ ಹೋರಾಟ ಅನಿವಾರ್ಯ: ಮುನೀರ್ ಕಾಟಿಪಳ್ಳ‌ ಎಚ್ಚರಿಕೆ

ಮಂಗಳೂರು: ಮಂಗಳೂರಿನ ಎಸ್‌ಇಝಡ್ ಒಳಗಡೆ ಹಲವು ಫಿಶ್ ಮಿಲ್ (ಮೀನು ಸಂಸ್ಕರಣಾ ಘಟಕ) ಗಳಿದ್ದು, ಇವುಗಳು ಕಾರ್ಮಿಕರಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ, ಸೂಕ್ತ ಸೌಲಭ್ಯ ಒದಗಿಸಿಲ್ಲ ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಅವರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹರಿಯಬಿಟ್ಟಿದ್ದಾರೆ.

ಭೂಮಸೂದೆ ಕಾಯ್ದೆ ಜಾರಿಯಾದಾಗ ಕಾರ್ಮಿಕರಿಗೆ ಹಕ್ಕುಗಳು ಸಿಕ್ಕಿದ್ದು ದಕ್ಷಿಣ ಕ‌ನ್ನಡದಲ್ಲೇ ಮೊದಲು ಹಾಗೂ ಹೆಚ್ಚು. ಅಂತಹ ನೆಲದಲ್ಲೇ ಮತ್ತೆ ಜೀತಗಾರಿಕೆಯ ದುಡಿಮೆ ಯಾವುದೇ ಮುಚ್ಚುಮರೆ ಇಲ್ಲದೆ ಬಹಿರಂಗವಾಗಿ ನಡೆಯುತ್ತಿರುವುದಾಗಿ ಮುನೀರ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳೂರಿನ SEZ ಒಳಗಡೆ ಹಲವು ಫಿಶ್ ಮಿಲ್ (ಮೀನು ಸಂಸ್ಕರಣಾ ಘಟಕ) ಗಳಿವೆ. ಒಂದೊಂದರಲ್ಲಿ ನೂರಾರು ಕಾರ್ಮಿಕರಿದ್ದಾರೆ. ಅದರಲ್ಲಿ ಒಂದು AOT ಇದರಲ್ಲೂ ಮುನ್ನೂರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇಲ್ಲಿರುವ ಕಾರ್ಮಿಕರಲ್ಲಿ ಬಹುತೇಕರು ಅಸ್ಸಾಂ ರಾಜ್ಯದವರು. ಇವರಲ್ಲಿ ಮಹಿಳೆಯರು ಸೇರಿ 16 ಜನ ಮೇ ತಿಂಗಳಲ್ಲಿ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರು. ವಲಸೆ ಕಾರ್ಮಿಕರಿಗೆ ಆಹಾರ ಸಾಮಾಗ್ರಿ ಒದಗಿಸುವ ಸಂದರ್ಭ ಒಂದು ಕೊಠಡಿಯಲ್ಲಿ ಹಸಿವಿನಿಂದ ಪರಿತಪಿಸುತ್ತಿದ್ದ ಈ ಕಾರ್ಮಿಕರ ಬಗ್ಗೆ ನಮ್ಮ ತಂಡದ ಗಮನಕ್ಕೆ ಬಂದಿದೆ. ಇವರು ತನ್ನಲ್ಲಿ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದಾಗಿ ವಿವರಿಸಿದ್ದಾರೆ.

ಉತ್ತರ ಭಾರತ ಮೂಲದ ಕಾರ್ಮಿಕ ಸರಬರಾಜು ಗುತ್ತಿಗೆದಾರ ದಂಪತಿಯ ಮೂಲಕ ಇವರು SEZ ಒಳಗಡೆಯ AOT ಫಿಶ್ ಮಿಲ್ ನಲ್ಲಿ‌ ಈ ಕಾರ್ಮಿಕರು ದುಡಿಯುತ್ತಿದ್ದಾರೆ. ದಿನಕ್ಕೆ ಹನ್ನೆರಡು ಗಂಟೆ ದುಡಿಮೆಯ ಅವಧಿಯಾಗಿದ್ದು, ತಿಂಗಳಿಗೆ 7, 500 ರೂಪಾಯಿ ಸಂಬಳ ಪಡೆಯುತ್ತಾರೆ. ಓವರ್ ಟೈಮ್ ಇಲ್ಲ, ಪಿಎಫ್, ಇಎಸ್ಐ, ಕೊನೆಗೆ ಹಾಜರಾತಿಯೂ ಇಲ್ಲ. ಒದು ದಿನ ರಜೆ ಪಡೆದರೆ 300 ರೂಪಾಯಿ ಕಡಿತ. ವಸತಿಯಿಂದ ಫಿಶ್ ಮಿಲ್ ಗೆ, ಫಿಷ್ ಮಿಲ್ ನಿಂದ ವಸತಿಗೆ ಗುತ್ತಿಗೆದಾರನೇ ಸಾಗಿಸುತ್ತಾನೆ. ಲಾಕ್ ಡೌನ್ ಅವಧಿಯಲ್ಲಿ ಮೊದಲು ಕೆಲವು ದಿನ ಕೆಲಸ ಇರಲಿಲ್ಲ. ಆ ಮೇಲೆ ದುಡಿದಿದ್ದೇವೆ. ಈಗ ಮೂರು ತಿಂಗಳ ಸಂಬಳ ಕೊಟ್ಟಿಲ್ಲ. ಕೇಳಿದರೆ ಬೆದರಿಸುತ್ತಾರೆ. ಸಂಬಳ ಕೊಡದ ಕಾರಣ ನಾವು ಕೆಲಸಕ್ಕೆ ಹೋಗುತ್ತಿಲ್ಲ. ಈಗ ಮಕ್ಕಳು ಮರಿಗಳ ಸಹಿತ ಹಸಿವಿನಿಂದ ಕಂಗೆಟ್ಟಿದ್ದೇವೆ, ನಮಗೆ ನ್ಯಾಯ ಕೊಡಿಸಿ” ಎಂದು ಅಳಲು ತೋಡಿಕೊಂಡಿದ್ದಾಗಿ ಮುನೀರ್‌ ತಿಳಿಸಿದ್ದಾರೆ.

ಹಸಿದಿದ್ದ ಕಾರ್ಮಿಕರಿಗೆ ದಿನಸಿ ಏರ್ಪಾಡು ಮಾಡಿರುವ ಡಿವೈಎಫ್‌ಐ ಈ ಕುರಿತು ತಮ್ಮ ಹೋರಾಟ ಸಮಿತಿಯ ಅಬೂಬಕ್ಕರ್ ಬಾವ, ರಾಜು, ಡಿವೈಎಫ್ಐನ ಇಕ್ಬಾಲ್ ಗುತ್ತಿಗೆದಾರನನ್ನು ಸಂಪರ್ಕಿಸಿದ್ದಾರೆ. ಮೊದಲು ನಕರಾ ಮಾಡಿದ ಗುತ್ತಿಗೆದಾರ “ವಾರದೊಳಗಡೆ ಬಾಕಿ ಸಂಬಳ ಪಾವತಿಸುವೆ” ಎಂದು ಹೇಳಿ ಒಂದಿಷ್ಟು ಕಾಲಾವಕಾಶ ಪಡೆದಿದ್ದ. ಸಮಯ ದಾಟಿದರೂ ಬಾಕಿ ಸಂಬಳ ಪಾವತಿಸದಿದ್ದಾಗ ನಾವು SEZ ಅಧಿಕಾರಿಗಳಿಗೆ ದೂರು ಸಲ್ಲಿಸಿದೆವು. ತಿಂಗಳಿನಿಂದ ಮಹಿಳೆಯರು ಮಕ್ಕಳು ಒಳಗೊಂಡ ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಲು AOT ಕಂಪೆನಿ, SEZ ಜೊತೆ ಸತತ ಮಾತುಕತೆ ನಡೆಸಿದೆವು. ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ AOT ಕಂಪೆನಿ ಕಾರ್ಮಿಕರ ಸಂಬಳ ಪಾವತಿಸಲು ನಿರಾಕರಿಸುತ್ತಿದೆ. ಎಲ್ಲವನ್ನೂ ವಂಚಕ ಗುತ್ತಿಗೆದಾರನ ತಲೆಗೆ ಕಟ್ಟಿ ತಾನು ಸುಬಗನ ಫೋಸು ಕೊಡಲು ನೋಡುತ್ತಿದೆ. ಪಿಎಫ್, ಇಎಸ್ಐ,ಕನಿಷ್ಟ ಕೂಲಿ, ಓಟಿ ಬಿಡಿ, ಬಾಕಿ ಸಂಬಳ ನೀಡಲು ನಿರಾಕರಿಸುತ್ತಿದೆ ಎಂದು‌ ಮುನೀರ್ ಆರೋಪಿಸಿದ್ದಾರೆ.

ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು SEZ ಅಧಿಕಾರಿಗಳು ನ್ಯಾಯ ಕೊಡಿಸಬೇಕು‌. ಇಲ್ಲದಿದ್ದರೆ ಜೀತದಾಳುಗಳಂತೆ ದುಡಿದ ಅಸ್ಸಾಂನ ಅಮಾಯಕ ಕಾರ್ಮಿಕರ ಬಾಕಿ ಸಂಬಳಕ್ಕಾಗಿ ಹೋರಾಟ ನಡೆಸಲಾಗುವುದು. SEZ ಒಳಗಡೆ ಫಿಷ್ ಮಿಲ್ ಗಳಲ್ಲಿ ನಡೆಯುವ ಜೀತಗಾರಿಕೆಯನ್ನು ಬಯಲಿಗೆಳೆದು ಬಡಪಾಯಿ ವಲಸೆ ಕಾರ್ಮಿಕರನ್ನು ರಕ್ಷಿಸಲಾಗುವುದು. ಅದಕ್ಕಾಗಿ ಈ ಕಿರು ಲಾಕ್ ಡೌನ್ ಅವಧಿ ಮುಗಿದ ತಕ್ಷಣ ಸಂತ್ರಸ್ತ ಕಾರ್ಮಿಕರ ಜೊತೆ SEZ ದ್ವಾರದ ಮುಂದೆ ಧರಣಿ ಕೂರುವುದಾಗಿ‌ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *