ಬ್ಲ್ಯಾಕ್‍ವುಡ್ ಹೋರಾಟ: ವಿಂಡೀಸ್‍ಗೆ ಜಯ

ಸೌತಂಪ್ಟನ್: ದ್ವಿತೀಯ ಇನ್ನಿಂಗ್ಸ್‍ನಲ್ಲಿ ಜರ್ಮೈನ್ ಬ್ಲ್ಯಾಕ್‍ವುಡ್ ಪ್ರದರ್ಶಿಸಿದ ಅಮೋಘ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್‍ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಅಮೋಘ ನಿರ್ವಹಣೆಯ ಮೂಲಕ ಗೆಲುವು ಸಾಧಿಸಿದ ವಿಂಡೀಸ್‍ಗೆ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ದ್ವಿತೀಯ ಇನ್ನಿಂಗ್ಸ್‍ನಲ್ಲಿ ಆಂಗ್ಲ ಪಡೆ 111.2 ಓವರ್‍ಗಳಲ್ಲಿ 313 ರನ್‍ಗಳ ಆಲೌಟ್ ಆಗಿತ್ತು. ಬ್ಯಾಟಿಂಗ್‍ನಲ್ಲಿ ತಂಡದ ಪರ ಡಾಮ್ ಸಿಬ್ಲೆ (50), ಜ್ಯಾಕ್ ಕ್ರೌಲಿ (76) ಹಾಗೂ ಬೆನ್ ಸ್ಟೋಕ್ಸ್ (46) ಹೋರಾಟಕಾರಿ ಆಟ ಪ್ರದರ್ಶಿಸಿದ್ದರು. ವಿಂಡೀಸ್ ಪರ ಬೌಲಿಂಗ್‍ನಲ್ಲಿ ಶನೋನ್ ಗ್ಯಾಬ್ರಿಯಲ್ ಐದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ 200 ರನ್‍ಗಳ ಗುರಿ ಬೆನ್ನತ್ತಿದ ವಿಂಡೀಸ್ ಪಡೆ 64.2 ಓವರ್‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ, ಜಯ ಸಾಧಿಸಿತು. ಒಂದು ಹಂತದಲ್ಲಿ ತಂಡ ನೂರು ರನ್ ಗಳಿಸಿದ್ದ ವೇಳೆ ನಾಲ್ಕು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಆದರೆ ಮತ್ತೊಂದು ಬದಿಯಲ್ಲಿ ಹೋರಾಟಕಾರಿ ಇನ್ನಿಂಗ್ಸ್ ಪ್ರದರ್ಶಿಸಿದ ಬ್ಲ್ಯಾಕ್‍ವುಡ್ ತಂಡಕ್ಕೆ ನೆರವಾದರು. ಅಂತಿಮವಾಗಿ ಬ್ಲ್ಯಾಕ್‍ವುಡ್ 12 ಬೌಂಡರಿಗಳ ನೆರವಿನಿಂದ 95 ರನ್ ಗಳಿಸಿದ್ದ ವೇಳೆ ಔಟಾದರೂ ಆ ವೇಳೆ ತಂಡವನ್ನು ಬಹುತೇಕ ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದ್ದರು. ರೋಸ್ಟನ್ ಚೇಸ್ (37) ಕೂಡ ಬ್ಲ್ಯಾಕ್‍ವುಡ್‍ಗೆ ಸಾಥ್ ನೀಡಿದ್ದರು. ಆಂಗ್ಲ ಪರ ಜೋಫ್ರಾ ಆರ್ಚರ್ ಮೂರು ಹಾಗೂ ಸ್ಟೋಕ್ಸ್ ಎರಡು ವಿಕೆಟ್ ಪಡೆದರು. ಇನ್ನು ಪ್ರಥಮ ಇನ್ನಿಂಗ್ಸ್‍ನಲ್ಲಿ ಆಂಗ್ಲಪಡೆ 204 ರನ್‍ಗಳಗೆ ಸರ್ವಪತನ ಕಂಡಿತ್ತು. ವಿಂಡೀಸ್ ಪರ ಜೀಸನ್ ಹೋಲ್ಡರ್ ಆರು ವಿಕೆಟ್ ಪಡೆದುಕೊಂಡಿದ್ದರು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ವಿಂಡೀಸ್ 318 ರನ್‍ಗಳಿಗೆ ಆಲೌಟಾಗಿತ್ತು. ವಿಂಡೀಸ್ ಪರ ಶೇನ್ ಡೌರಿಚ್ (61)ಅರ್ಧಶತಕ ಸಿಡಿಸಿದ್ದರು.

Leave a Reply

Your email address will not be published. Required fields are marked *