ಬೆಳ್ತಂಗಡಿ: ಹೊಂಡ ಬಿದ್ದ ಜಾಗದಲ್ಲಿ ನಿಧಿ ಶಂಕೆ: ಪೊಲೀಸ್, ತಹಶಿಲ್ದಾರರಿಂದ ಪರಿಶೀಲನೆ

ಬೆಳ್ತಂಗಡಿ: ತಾಲೂಕಿನ ನಡ ಗ್ರಾ.ಪಂ ವ್ಯಾಪ್ತಿಯ ಕನ್ಯಾಡಿ ಕಜೆ ಪಣೆತ್ತಡಿ ಆನಂದ ಶೆಟ್ಟಿ ಅವರ ಮನೆಯ ಜಾಗದಲ್ಲಿ ನಿಧಿ ಇದೆ ಎಂಬ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜು.
21 ರಂದು ತಹಶಿಲ್ದಾರ ಮತ್ತು ಪೊಲೀಸ್ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದರು.
ಮೇ ತಿಂಗಳಲ್ಲಿ ಆನಂದ ಶೆಟ್ಟಿ ಮತ್ತು ಶೀನ ಶೆಟ್ಟಿ ಅವರ ಗಡಿ ಜಾಗಕ್ಕೆ ತಾಗಿಕೊಂಡು, ಆನಂದ ಶೆಟ್ಟಿ ಅವರ ಜಾಗದಲ್ಲಿ ಮೇ ತಿಂಗಳಲ್ಲಿ ಕೊಳವೆ ಬಾವಿ ಕೊರೆಯಲಾಗಿತ್ತು.
ಇದಾ್ ಬಳಿಕ ಇಪ್ಪತ್ತು ದಿನಗಳ ಹಿಂದೆ ಆನಂದ ಶೆಟ್ಟಿ ಅವರು ನೀರಾವರಿಗೆ ಪೈಪ್ ಲೈನ್ ತೋಡುವ ವೇಳೆ ಒಂದು ಜಾಗದಲ್ಲಿ ಸ್ವಲ್ಪ ಆಳವಾದ ಹೊಂಡ ಕಾಣಿಸಿಕೊಂಡಿತು.
ಪೈಪ್ ಲೈನ್ ಗೆ ಅಡ್ಡಿಯಾಗಿರುವುದರಿಂದ ಆನಂದ ಶೆಟ್ಟಿ ಅವರು ಸದ್ರಿ ಗುಂಡಿಯನ್ನು ಕಲ್ಲು, ಶೀಟ್ ಇಟ್ಟು ಮುಚ್ಚಿದ್ದರು. ಇರುವ ಹೊಂಡ ಅಂದಾಜು 7 ರಿಂದ 8ಅಡಿ ಇತ್ತೆಂದು ಹೇಳಲಾಗಿದೆ.
ಸ್ಥಳದಲ್ಲಿ ಈರೀತಿ ಗುಂಡಿ ಆಗಿದೆ ಎಂದು ಊರಿನಲ್ಲಿ ಪ್ರಚಾರವಾಗಿದ್ದು, ಇದನ್ನು ಯಾರೋ ವೀಡಿಯೋ ಮಾಡಿ ಅದು ಪುತ್ತೂರು ಎ.ಸಿ ಡಾ.ಯತೀಶ್ ಉಳ್ಳಾಲ್ ಗಮನಕ್ಕೆ ಹೋಗಿತ್ತು.

ಅಲ್ಲಿಂದ ಮಾಹಿತಿ ತಹಶಿಲ್ದಾರರರಿಗೆ ಬಂದಿದ್ದು, ಅವರು ಮತ್ತು ಪೊಲೀಸರು ಜೊತೆಯಾಗಿ ಸ್ಥಳ ತನಿಖೆ ಕೈಗೊಂಡಿದ್ದಾರೆ.
ತಹಶಿಲ್ದಾರ ಮಹೇಶ್ ಜೆ.ಎಮ್., ಬೆಳ್ತಂಗಡಿ ಎಸ್.ಐ ನಂದಕುಮಾರ್ ಎಂ.ಎಂ, ವಿ.ಎ. ಅಂಕಿತ್, ಗ್ರಾಮ ಸಹಾಯಕ ಗಣೇಶ್, ಸ್ಥಳೀಯ ಪ್ರಮುಖರಾದ ಮಧುಸೂಧನ, ರಾಜೇಶ್ ಜಿ, ಮಾಯಿಲಪ್ಪ ನಾಯ್ಕ, ಪವನ್ ಶೆಟ್ಟಿ, ಶೇಖರ ನಾಯ್ಕ, ಚನನ ಗೌಡ ಮೊದಲಾದವರು ಉಪಸ್ಥಿತರಿದ್ದರು