ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರಿಂದ ಕಿರು ಸೇತುವೆ ಉದ್ಘಾಟನೆ

ಬೆಳ್ತಂಗಡಿ: ನಿಟ್ಟಡೆ ಗ್ರಾಮದ ಫಂಡಿಜೆ ಎಂಬಲ್ಲಿನ ದಂಬೆದಡಿ ಎಂಬಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಮಂಗಳವಾರ ಶಾಸಕ ಹರೀಶ ಪೂಂಜ ಉದ್ಘಾಟಿಸಿದರು.
ತಾಲೂಕಿಗೆ ಕಳೆದೆರಡು ವರ್ಷಗಳಲ್ಲಿ ಸುಮಾರು 600 ಕೋಟಿ ರೂ.ಗಳ ವಿವಿಧ ಕಾಮಗಾರಿಗಳು ನಡೆದಿವೆ. ಸುಮಾರು 28 ಇಂತಹ ಕಿರುಸೇತುವೆಗಳು ನಿರ್ಮಾಣವಾಗಲಿವೆ. ನಿಟ್ಟಡೆ ಗ್ರಾಮದಲ್ಲಿ ಎರಡು ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿವೆ. ಗ್ರಾಮದ ಯಾವತ್ತೂ ಅಭಿವೃದ್ಧಿಗೆ ನಾನು ಸಿದ್ಧ ಎಂದು ಶಾಸಕರು ವಿವರಿಸಿದರು.
ಕಾರ್ಯಕ್ರಮದ ಸಂದರ್ಭ ನಿಟ್ಟಡೆ ಗ್ರಾ.ಪಂ. ಆಡಳಿತಾಧಿಕಾರಿ ಶಿವಪ್ರಸಾದ ಅಜಿಲ, ಸೇತುವೆ ನಿರ್ಮಿಸಿದ ಪುತ್ತೂರು ಮಾಸ್ಟರ್ ಪ್ಲಾನರಿ ಮಾಲಕ ಆಕಾಶ್, ಗುತ್ತಿಗೆದಾರ ಪ್ರಭಾಕರ, ತಾ.ಪಂ.ಸದಸ್ಯ ಜೋಯೆಲ್ ಮೆಂಡೋನ್ಸಾ, ಸದಾನಂದ ಪೂಜಾರಿ ಉಂಗಿಲಬೈಲು, ನಿವೃತ್ತ ಮುಖ್ಯಶಿಕ್ಷಕ ಮಾಧವ ಕಾರಂತ, ಗ್ರಾಮಸ್ಥರಾದ ಭುವನೇಶ್, ಸುರೇಶ್ ಹೆಬ್ಬಾರ್, ರತ್ನಾಕರ ಹೆಬ್ಬಾರ್, ಪ್ರಸನ್ನ ಹೆಬ್ಬಾರ್, ವಿಕಾಸ ಹೆಬ್ಬಾರ್, ಜಯಾನಂದ ಸಾಠೆ, ಶರಶ್ಚಂದ್ರ ತಾಮನ್ಕಾರ್, ಭಾಸ್ಕರ ಆಚಾರ್ಯ, ವರದ ಕುಲಾಲ್, ಜನಾರ್ದನ, ಕಾರ್ತಿಕ, ಸತೀಶ, ದಿನೇಶ, ಪ್ರದೀಪ, ಅನಿಲ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ನಿಟ್ಟಡೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಸ್ವಾಗತಿಸಿ,ವಂದಿಸಿದರು.
ಕಳೆದ ಮಳೆಗಾಲದಲ್ಲಿ ಇದೇ ಜಾಗದಲ್ಲಿ ಅಡಕೆ ಮರದ ಕಾಲು ಸಂಕವಿತ್ತು. ಆದಿತ್ಯ ಎಂಬ ಬಾಲಕ ಸಂಕದ ಮೇಲೆ ಹೋಗುತ್ತಿದ್ದಾಗ ಜಾರಿ ಬೀಳುತ್ತಿದ್ದ. ಆದರೆ ಅದೇ ವೇಳೆ ಸುಜಯ ಎಂಬ ಬಾಲಕ ಅದಿತ್ಯನ ರಕ್ಷಣೆ ಮಾಡಿ ಪ್ರಾಣ ಉಳಿಸಿದ್ದ. ಸುಜಯನ ಸಮಯಪ್ರಜ್ಞೆಗೆ ರಾಜ್ಯ ಸರಕಾರ ಸಮ್ಮಾನಿಸಿತ್ತು.