ಬೆಳ್ತಂಗಡಿ: ಕೊರೋನಾಕ್ಕೆ ಮುಸ್ಲಿಂ ಧರ್ಮಗುರು ಸಹಿತ ಇಬ್ಬರು ಬಲಿ

ಬೆಳ್ತಂಗಡಿ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಮುಸ್ಲಿಂ ಧರ್ಮಗುರುವೊಬ್ಬರೂ‌ ಸೇರಿದಂತೆ ಸೋಮವಾರ ಇಬ್ಬರು ಬಲಿಯಾಗಿದ್ದಾರೆ.
ತೀವ್ರ ಮಧುಮೇಹ ಮತ್ತು ನರ ಸಂಬಂಧಿ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 45 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಲವಂತಿಗೆ ಗ್ರಾಮದ ಪಾದೆಗುತ್ತು ನಿವಾಸಿ 51 ವರ್ಷ ಪ್ರಾಯದ ಧರ್ಮಗುರುಗಳು ಸೋಮವಾರ ಕೊನೆಯುಸಿರೆಳೆದರು. ಅವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿದ್ದು ರವಿವಾರವೇ ಅವರಿಗೆ ಕೊರೊನಾ ಬಾಧಿಸಿರುವುದು ಖಚಿತಗೊಂಡಿತ್ತು. ಆದರೆ ಅಧಿಕೃತ ಪ್ರಕಟಣೆ ಆಗಿರಲಿಲ್ಲ.
ಮೃತರು ಎಸ್.ವೈ.ಎಸ್ ಕಾಜೂರು ಶಾಖೆಯ ಅಧ್ಯಕ್ಷರಾಗಿದ್ದರು. ಹಲವು ಮಸೀದಿಗಳಲ್ಲಿ ಧರ್ಮಗುರುಗಳಾಗಿದ್ದ ಅವರು ಆಧ್ಯಾತ್ಮಿಕ ಹಿನ್ನೆಲೆಯ ಧಾರ್ಮಿಕ ದುಆ ಪ್ರಾರ್ಥನೆ ಯಲ್ಲಿ ಪ್ರಸಿಧ್ಧಿ ಪಡೆದಿದ್ದರು.
ಕಾಜೂರು, ಬೊಳ್ಮಿನಾರ್, ಗುರುವಾಯನಕೆರೆ ಮೊದಲಾದ ಪ್ರಸಿದ್ಧ ದರ್ಗಾಶರೀಫ್ ಗಳಲ್ಲಿ ದುಆ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಏಳು ಮಂದಿ ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ವಿಧಿಗಳನ್ನು ಎಸ್ಸೆಸ್ಸೆಫ್, ಎಸ್‌ವೈಎಸ್ ಸಂಘಟನೆಯ ತರಬೇತಿ ಪಡೆದ ಕಾರ್ಯಕರ್ತರು ಸೂಕ್ತ ರಕ್ಷಣಾ ವ್ಯವಸ್ಥೆಯೊಂದಿಗೆ ನೆರವೇರಿಸಿಕೊಟ್ಟರು.
ಇನ್ನೋರ್ವ ವ್ಯಕ್ತಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿ ನಿವಾಸಿ, ಪ್ರಸ್ತುತ ಮೂಡಬಿದ್ರೆಯಲ್ಲಿ‌ನೆಲೆಸಿ ಬಸ್ಸು ಚಾಲಕರಾಗಿದ್ದ 41 ರ ಹರೆಯದ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರ ಮಧ್ಯೆ ಅವರ ಗಂಟಲದ್ರವ ಪರೀಕ್ಷೆ ನಡೆಸಿದ್ದು ಅದರಿಂದ ಕೊರೊನಾ ದೃಢಪಟ್ಟಿದೆ.
ಅವರ ಅಂತ್ಯಸಂಸ್ಕಾರ ನೆರಿಯ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಉಳಿದಂತೆ ತಾಲೂಕಿನ ಇನ್ನಿಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಪುಂಜಾಲಕಟ್ಟೆ ನಿವಾಸಿ 58 ವರ್ಷದ ಮಹಿಳೆ ಮತ್ತು ಜಾರಿಗೆಬೈಲಿನ 36 ವರ್ಷದ ಯುವಕನಿಗೆ ಕೊರೊನಾ ಇರುವುದು ಆರೋಗ್ಯ ಇಲಾಖೆ ಘೋಷಿಸಿದೆ.

Leave a Reply

Your email address will not be published. Required fields are marked *