ಬೆಳ್ತಂಗಡಿ: ಆಶಾ ಕಾರ್ಯಕರ್ತೆಗೆ ಹಲ್ಲೆಗೈದು ಪತಿರಾಯ ಪರಾರಿ!

ಬೆಳ್ತಂಗಡಿ: ಕೋವಿಡ್ ಜಾಗೃತಿ ಮತ್ತು ನಿಯಂತ್ರಣ ಕಾರ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯದಲ್ಲಿರುವ ಅಶಾ ಕಾರ್ಯಕರ್ತೆಯ ಮೇಲೆ ಆಕೆಯ ಪತಿಯೇ ಗಂಭೀರ ಹಲ್ಲೆಗೈದ ಘಟನೆ ಗೇರುಕಟ್ಟೆಯ ಬಳಿ ಇಂದು ಸಂಜೆ ನಡೆದಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಕಳಿಯ ಗ್ರಾಮದ ಪೆಲತ್ತಳಿಕೆ ನಿವಾಸಿ ಸುರೇಶ್ ತಲೆಮರೆಸಿಕೊಂಡಿದ್ದಾನೆ.
ಆಶಾ ಕಾರ್ಯಕರ್ತೆ ಭವಾನಿ ಎಂಬಾಕೆ ಹಲ್ಲೆಗೀಡಾಗಿದ್ದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಮನೆ ಭೇಟಿ ಸಮಯದಲ್ಲಿ ಕಳಿಯ ಗ್ರಾಮದ ಪೇಲತ್ತಳಿಕೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜೊತೆಗಿದ್ದ ಅಂಗನವಾಡಿ ಕಾರ್ಯಕರ್ತೆಗೂ ಹಲ್ಲೆ ಮಾಡಲು ಮುಂದಾದಾಗ ಸ್ಥಳೀಯರು ಆತನನ್ನು ತಡೆದಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಕೌಟುಂಬಿಕ ವೈಮನಸ್ಸು ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಭವಾನಿ ಪತಿಯನ್ನು ತೊರೆದು ಪುದುವೆಟ್ಟಿನ ತನ್ನ ತಾಯಿ ಮನೆಯಲ್ಲಿ ಇಬ್ಬರು ಅವಳಿ ಪುತ್ರಿಯರ ಜೊತೆ ವಾಸಿಸುತ್ತಿದ್ದರು.

Leave a Reply

Your email address will not be published. Required fields are marked *