ಬಿಸಿಸಿಐಗೆ ಕಗ್ಗಂಟಾದ ಐಪಿಎಲ್ ಆಯೋಜನೆ!

ಮುಂಬೈ: ಸದ್ಯ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರ ಬಗ್ಗೆ ಸದ್ಯ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್, ವಿದೇಶಗಳಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಿವುದು ಬಿಸಿಸಿಐ ಎದುರಿರುವ ಅಂತಿಮ ಆಯ್ಕೆ ಮಾತ್ರವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಐಪಿಎಲ್ ಆಯೋಜನೆಗೆ ತೊಡಕಾಗಿದೆ. ಒಟ್ಟಿನಲ್ಲಿ ಸದ್ಯ ಬಿಸಿಸಿಐ ಕಗ್ಗಂಟಿಗೆ ಸಿಲುಕಿದೆ.
ಭಾರತದಲ್ಲೇ ಐಪಿಎಲ್ ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಬಾರದಿದ್ದರೆ ಮಾತ್ರ ವಿದೇಶದಲ್ಲಿ ಆಯೋಜಿಸಲು ಆಲೋಚಿಸುತ್ತೇವೆ. ಯುಎಇ, ಶ್ರೀಲಂಕಾ, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಗಳು ಐಪಿಎಲ್‍ಗೆ ಅತಿಥ್ಯ ವಹಿಕೊಳ್ಳುವ ಕುರಿತು ಹೇಳಿವೆ. ಒಂದೊಮ್ಮೆ ಐಪಿಎಲ್ ವಿದೇಶದಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣವಾದರೇ ಐಪಿಎಲ್ ಆಡಳಿತಾತ್ಮಕ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ ವಿದೇಶದಲ್ಲಿ ನಮಗೆ ಟೂರ್ನಿ ಆಯೋಜಿಸುವುದು ಬಿಸಿಸಿಐ ಮುಂದಿರುವ ಅಂತಿಮ ಆಯ್ಕೆ ಅಷ್ಟೇ ಎಂದು ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದಿರುವುದರಿಂದ ಸೆಪ್ಟಂಬರ್ ವೇಳೆಗೆ ವೈರಸ್ ಪ್ರಭಾವ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ವಿದೇಶಿದಲ್ಲಿ ಐಪಿಎಲ್ ಆಯೋಜಿಸಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಟೂರ್ನಿಯ ಅತಿಥ್ಯ ವಹಿಸಿಕೊಳ್ಳಲು ಶ್ರೀಲಂಕಾ, ಯುಎಇ, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಗಳು ಸಿದ್ಧರಾಗಿರುವುದಾಗಿ ಹೇಳಿವೆ. ಕೊರೊನಾ ವೈರಸ್ ಕಾರಣದಿಂದ ಮಾರ್ಚ್ 29 ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಒಂದೊಮ್ಮೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಬೇಕಿರುವ ವಿಶ್ವಕಪ್ ಟಿ20 ಮುಂದೂಡಿದರೆ ಈ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.

Leave a Reply

Your email address will not be published. Required fields are marked *