ಬಾಳಿಗಾ ಸಹೋದರಿಗೆ ವಿದೇಶದಿಂದ ಕೊಲೆ ಬೆದರಿಕೆ!

ಮಂಗಳೂರು: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ಆರ್‍ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಲ್ಲಿಸಿದ್ದ ಅರ್ಜಿಯ ಬೆನ್ನಲ್ಲೇ ಕುಟುಂಬಕ್ಕೆ ವಿದೇಶದಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿನಾಯಕ ಬಾಳಿಗಾ ಸಹೋದರಿ ಅನುರಾಧಾ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಪ್ರಕರಣದ ತನಿಖೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಆಯುಕ್ತಾಲಯ ಕಚೇರಿಗೆ ಜು.28ರಂದು ಸಂಜೆ 5 ಗಂಟೆಗೆ ಹಾಜರಾಗುವಂತೆ ಬಾಳಿಗಾ ಸಹೋದರಿಗೆ ಸೂಚಿಸಲಾಗಿತ್ತು. ಇದರ ಹಿಂದಿನ ರಾತ್ರಿ (ಜು.27) ಬೆದರಿಕೆ ಕರೆಗಳು ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ದುಬೈನಿಂದ ಅನಾಮಧೇಯ ನಂಬರ್‍ಗಳಿಂದ ಕರೆಗಳು ಬಂದಿದ್ದು, ತುಳು ಭಾಷೆಯಲ್ಲಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಪ್ರಕರಣದ ಆರೋಪಿಗಳ ವಿರುದ್ಧ ದೂರು ನೀಡಲು ಮುಂದಾದರೆ ಜೀವ ಸಹಿತ ಬಿಡುವುದಿಲ್ಲವೆಂದೂ ನಿರಂತರವಾಗಿ ಹಲವು ಬಾರಿ ಬೆದರಿಕೆ ಹಾಕಲಾಗಿದೆ. ಬೆದರಿಕೆಯೊಡ್ಡಿದ ಬಗ್ಗೆ ಹಾಗೂ ವಿದೇಶದಿಂದ ಬಂದ ಫೋನ್ ಕರೆಗಳ ವಿವರವನ್ನು ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಬಾಳಿಗಾ ಸಹೋದರಿ ಉಲ್ಲೇಖಿಸಿದ್ದಾರೆ. ಪೊಲೀಸ್ ಆಯಕ್ತರಿಗೆ ದೂರು ನೀಡಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲೂ ಮಲೇಶಿಯಾದಿಂದ ಬೆದರಿಕೆ ಒಡ್ಡುವ ಕರೆಗಳು ಪುನರಾವರ್ತನೆಯಾಗಿವೆ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟಗಳ ಡಾ.ನರೇಂದ್ರ ನಾಯಕ್ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ದಕ್ಷಿಣ ಕನ್ನಡ ನಿರ್ಗಮಿತ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಒಡ್ಡಿದ್ದ ಬೆನ್ನಲ್ಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಯಿತು. ಆದರೆ, ಬಾಳಿಗಾ ಹತ್ಯೆ ಪ್ರಕರಣದ ದೂರುದಾರರು ಹಾಗೂ ಪ್ರಮುಖ ಸಾಕ್ಷಿಗಳಿಗೆ ಕೊಲೆ ಬೆದರಿಕೆ ಒಡ್ಡಿದ ಗಂಭೀರ ಪ್ರಕರಣ ವರದಿಯಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ನಡೆಯಾಗಿದೆ. ವಿದೇಶದಿಂದ ಬೆದರಿಕೆ ಒಡ್ಡಿದ ಕರೆಗಳ ನಂಬರ್‍ನ್ನು ಮರೆಮಾಚುವ ದುಷ್ಕೃತ್ಯವೂ ಇಲ್ಲಿ ನಡೆದಿದೆ. ಇಂತಹ ಗಂಭೀರ ಪ್ರಕರಣವನ್ನು ಭೇದಿಸುವುದು ಮಂಗಳೂರು ಪೊಲೀಸರಿಗೆ ಕಷ್ಟವೇನಲ್ಲ ಎಂದು ಡಾ.ನರೇಂದ್ರ ನಾಯಕ್ ತಿಳಿಸಿದ್ದಾರೆ.
ಮಂಗಳೂರು ನಗರದ ವೆಂಕಟ್ರಮಣ ದೇವಸ್ಥಾನ, ಕಾಶಿ ಮಠ ಮತ್ತು ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಲೆಕ್ಕ ಅವ್ಯವಹಾರದ ಬಗ್ಗೆ ಆರ್‍ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಧ್ವನಿ ಎತ್ತಿದ್ದರು. ಪಾರದರ್ಶಕ ಹಣ ಸಂಗ್ರಹದ ಬಗ್ಗೆ ಹೆಚ್ಚಿನ ಹೊಣೆಗಾರಿಕೆ ತರಲು ತೀವ್ರ ಹೋರಾಟದ ಮೂಲಕ ಶ್ರಮಿಸಿದ್ದರು. ವಿನಾಯಕ್ ಬಾಳಿಗಾ ಅವರು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರೂ ಆಗಿದ್ದರು. 2016ರ ಮಾರ್ಚ್ 21ರಂದು ನಸುಕಿನ ಜಾವ 5:30ರ ಸುಮಾರಿಗೆ ತನ್ನ ಮನೆಯ ಎದುರೇ ವಿನಾಯಕ್ ಬಾಳಿಗಾ ಬರ್ಬರವಾಗಿ ಹತ್ಯೆಗೊಳಗಾಗಿದ್ದರು. ಏಕೈಕ ಪುತ್ರನ ಧಾರುಣ ಸಾವಿನ ಶೋಕದಲ್ಲೇ ವೃದ್ಧ ಪೋಷಕರು ನೊಂದು ಬದುಕು ಕೊನೆಗೊಳಿಸಿದರು. ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಪ್ರಕರಣದ ತನಿಖೆ ಇನ್ನೂ ಆರಂಭವಾಗದ ಕಾರಣ ವಿಚಾರಣೆ ಪೂರ್ಣಗೊಂಡಿಲ್ಲ.

Leave a Reply

Your email address will not be published. Required fields are marked *