ಪ್ಲಾಸ್ಮಾ ದಾನಿಗಳ ಕೇಂದ್ರವಾದ ಧಾರಾವಿ!

ಮುಂಬೈ: ಒಂದು ಹಂತದಲ್ಲಿ ದೇಶದ ಕೊರೊನಾ ಮಹಾಮಾರಿಯ ಹಾಟ್‍ಸ್ಪಾಟ್ ಆಗಿದ್ದ, ಏಶ್ಯಾದ ಬೃಹತ್ ಕೊಳಗೇರಿಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿ ಇದೀಗ ಪ್ಲಾಸ್ಮಾ ದಾನಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಈಗಾಗಲೇ ಕೊರೊನಾದಿಂದ ಗುಣಮುಖರಾಗಿರುವ 450ಕ್ಕೂ ಹೆಚ್ಚು ಮಂದಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದು, ಈ ನಿಟ್ಟಿನಲ್ಲಿ ಧಾರಾವಿಯಲ್ಲಿಯೇ ಪ್ಲಾಸ್ಮಾ ಕೇಂದ್ರವನ್ನು ಆರಂಭಿಸಲು ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ಸಿಯಾನ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ.
ಸರ್ಕಾರ ತೆಗೆದುಕೊಂಡ ಸಮರ್ಪಕ ನೀತಿಯ ಪರಿಣಾಮ ಹಾಗೂ ಸುರಕ್ಷತಾ ಕ್ರಮಗಳಿಂದಾಗಿ ಧಾರಾವಿಯಲ್ಲಿ ಸೋಂಕಿತರು ಗುಣಮುಖರಾಗುವ ಸಂಖ್ಯೆ ಶೇಕಡ 85ರಷ್ಟು ತಲುಪಿದೆ. ಸದ್ಯ ಧಾರಾವಿ ಈಗ ಕೊರೊನಾ ಮುಕ್ತವಾಗುವ ಹಾದಿಯಲ್ಲಿ ಸಾಗುತ್ತಿದ್ದು, ಸರ್ಕಾರ ಸಹಜವಾಗಿಯೇ ನಿಟ್ಟುಸಿರು ಬಿಡುವಂತಾಗಿದೆ. ಧಾರಾವಿಯೇ ಕೊರೊನಾ ಸೋಂಕಿತರು ಗುಣಮುಖರಾಗಲು ನೆರವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಇಲ್ಲಿನ ಗುಣಮುಖರಾಗಿರುವ ಸೋಂಕಿತರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಧಾರಾವಿಯಲ್ಲಿರುವ ಕೊರೊನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ಪಡೆದು ತೀವ್ರ ಬಾಧಿತರಾಗಿರುವವರಿಗೆ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರಾವಿಯ ಸಾಮಾಜಿಕ ಕಾರ್ಯಕರ್ತ ಸತೀಶ್‍ಕಾಟ್ಕೆ (42) ಪ್ಲಾಸ್ಮಾ ದಾನಕ್ಕೆ ಮುಂದೆ ಬಂದಿದ್ದಾರೆ. ಧಾರಾವಿಯಲ್ಲಿ ಸೋಂಕು ಹೆಚ್ಚಾದಾಗ ನನಗೂ ಮತ್ತು ನನ್ನ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತು. ಹಲವು ದಿನಗಳ ಚಿಕಿತ್ಸೆಯ ನಂತರ ಈಗ ಗುಣಮುಖರಾಗಿದ್ದೇವೆ. ಈ ಸಂದರ್ಭದಲ್ಲಿ ಹಲವು ನೋವು, ಆತಂಕದ ಕ್ಷಣಗಳನ್ನು ಎದುರಿಸಿದೆವು. ಈಗ ಪ್ಲಾಸ್ಮಾ ದಾನ ಮಾಡುವ ಮೂಲಕ ಸೋಂಕಿತರಿಗೆ ನೆರವಾಗಲು ಮುಂದಾಗಿದ್ದೇವೆ. ಇದರಿಂದ ಹಲವು ಮಂದಿಗೆ ಒಳ್ಳೆಯದು ಆಗಲಿ ಎಂಬುದಷ್ಟೇ ನನ್ನ ಆಶಯ ಎಂದು ಸತೀಶ್ ಹೇಳಿದ್ದಾರೆ. ಧಾರಾವಿಯಲ್ಲಿರುವ ಗುಣಮುಖರಾದ ಸೋಂಕಿತರ ಪೈಕಿ ಪ್ಲಾಸ್ಮಾ ದಾನ ಮಾಡಲು 21 ರಿಂದ 60 ವರ್ಷದೊಳಗಿನವರೇ ಮುಂದೆ ಬಂದಿದ್ದಾರೆ. ಇವರಲ್ಲಿ ಕೆಲವು ಆರೋಗ್ಯ ಕಾರ್ಯಕರ್ತರು ಇದ್ದಾರೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಬಿಎಂಸಿ ಆಯುಕ್ತರಾದ ಕಿರಣ್ ಧಿಗ್ವಾಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *