ಪ್ರವಾಸಿಗರ ವಾಹನಗಳಿಗೆ ಆಕ್ರೋಶಿತ ನಾಗರಿಕರಿಂದ ತಡೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಟ್ಟ ಜಿಲ್ಲಾಡಳಿತ ವಿರುದ್ಧ ನಿನ್ನೆ ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರು ಆಕ್ರೊಶ ವ್ಯಕ್ತಪಡಿಸಿ, ಪ್ರವಾಸಿಗರ ವಾಹನಗಳಿಗೆ ತಡೆಯೊಡ್ಡಿದ ಘಟನೆ ನಿನ್ನೆ ನಡೆಯಿತು.
ಜಿಲ್ಲಾಡಳಿತ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ್ದರಿಂದ ಕೊರೊನಾ ಸೋಂಕು ಹೆಚ್ಚುತ್ತಿದ್ದು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಅಲ್ಲದೆ ನಿನ್ನೆ ಮಡಿಕೇರಿಗೆ ಹಲವು ಕಡೆಗಳಿಂದ ಪ್ರವಾಸಿಗರು ಆಗಮಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಟ್ಟದಳ್ಳಿ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು ಪ್ರವಾಸಿಗರ ವಾಹನಗಳನ್ನು ತಡೆದು ವಾಪಸ್ ಕಳುಹಿಸಿದರು. ನಗರ ಪ್ರದೇಶದಲ್ಲಿದ್ದ ಸೋಂಕು ಈಗ ಗ್ರಾಮೀಣ ಭಾಗದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಲ್ಲಳ್ಳಿ ಜಲಪಾತ ವೀಕ್ಷಿಸುವ, ಬೆಟ್ಟದ ಮೇಲೆ ಟ್ರೆಕ್ಕಿಂಗ್ ಮಾಡುವ ನೆಪದಲ್ಲಿ ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲಿ ಸೋಂಕಿತರನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ಈಗಂತೂ ಕೊರೊನಾ ಭಯದಿಂದ ಮನೆ ಬಿಟ್ಟು ಹೊರಬರಲು ರೈತರು ಭಯಪಡುತ್ತಿದ್ದಾರೆ. ಹೊರಗಿನಿಂದ ಬರುವ ಪ್ರವಾಸಿಗರನ್ನು ಕಂಡರೆ ಭಯವಾಗುತ್ತಿದೆ. ಕೊರೊನಾ ಮಾಹಾಮಾರಿ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಹರಡಿಲ್ಲ. ನಗರ ಪ್ರದೇಶದ ಜನ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಎಂಜಾಯ್ ಮಾಡಲು ಬರುತ್ತಿರುವುದು ನಮಗೆ ಅತಂಕ ತಂದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *