ಪೊಲೀಸರ ಮೇಲಿನ ಶೂಟೌಟ್: ಠಾಣೆಯಿಂದಲೇ ರೌಡಿಗಳಿಗೆ ಮಾಹಿತಿ!

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸರ ಮೇಲಿನ ಭೀಕರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದು ವಿಚಾರಗಳು ಸದ್ಯ ಬೆಳಕಿಗೆ ಬರುತ್ತಿವೆ. ರೌಡಿಶೀಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಬರುವ ಮಾಹಿತಿಯನ್ನು ಸ್ವತಹ ಪೊಲೀಸ್ ಅಧಿಕಾರಿಯೇ ರೌಡಿಗಳಿಗೆ ನೀಡಿದ್ದ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಕಾಸ್‍ನ ಓರ್ವ ಸಹಚರನನ್ನು ಬಂಧಿಸಲಾಗಿದ್ದು, ಆತನೇ ಸದ್ಯ ಈ ವಿಚಾರ ಬಹಿರಂಗ ಪಡಿಸಿದ್ದಾನೆ.
ಬಂಧಿತ ವಿಕಾಸ್ ದುಬೆ ಸಹಚರನನ್ನು ದಯಾ ಶಂಕರ್ ಅಗ್ನಿಹೋತ್ರಿ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ನಿನ್ನೆ ಮುಂಜಾನೆ ಕಲ್ಯಾಣಪುರದಲ್ಲಿ ಅಡ್ಡಹಾಕಿದ್ದಾರೆ. ಆಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ದಯಾ ಶಂಕರ್ ಕಾಲಿಗೆ ಗುಂಡಿಕ್ಕಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸ್ ವಿಚಾರಣೆಯ ವೇಳೆ ದಯಾಶಂಕರ್ ಹಲವು ಆಘಾತಕಾರಿ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾನೆ ಎನ್ನಲಾಗಿದೆ. ವಿಕಾಸ್ ದುಬೆಗೆ ಪೊಲೀಸರು ಅರೆಸ್ಟ್ ಮಾಡಲು ಬರುತ್ತಾರೆ ಎಂದು ಮೊದಲೇ ಗೊತ್ತಿತ್ತು. ದುಬೆಗೆ ಪೊಲೀಸ್ ಇಲಾಖೆಯಲ್ಲೇ ಮಾಹಿತಿ ನೀಡುವವರು ಇದ್ದು, ಘಟನೆ ನಡೆದ ದಿನ ಚೌಬೆಪುರ ಪೊಲೀಸ್ ಠಾಣೆಯಿಂದ ಓರ್ವ ಪೊಲೀಸ್ ಅಧಿಕಾರಿ ಕರೆ ಮಾಡಿ ನಿನ್ನನ್ನು ಅರೆಸ್ಟ್ ಮಾಡಲು ಪೊಲೀಸರು ನಿಮ್ಮ ಗ್ರಾಮಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದರು ಎಂದು ಹೇಳಿದ್ದಾನೆ. ಪೊಲೀಸರು ನನ್ನನ್ನು ಅರೆಸ್ಟ್ ಮಾಡಿದರೆ ನಾನೂ ಜೈಲು ಪಾಲಾಗುತ್ತೇನೆ ಎಂದು ವಿಕಾಸ್ ದುಬೆಗೆ ಗೊತ್ತಿತ್ತು. ಆದ್ದರಿಂದ ಆತ ವಿಷಯ ತಿಳಿಯುತ್ತಿದ್ದಂತೆ ತನ್ನ ಗ್ಯಾಂಗಿನ ಹುಡುಗರನ್ನು ಕರೆಸಿಕೊಂಡು ತಮ್ಮ ಗ್ರಾಮದಲ್ಲಿ ಉಳಿಸಿಕೊಂಡಿದ್ದ. ಪೊಲೀಸರಿಂದ ಮೊದಲೇ ಮಾಹಿತಿ ಸಿಕ್ಕ ಕಾರಣ ಪೊಲೀಸರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಗ್ರಾಮಕ್ಕೆ ಬಂದ ಪೊಲಿಸರನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಕೊಂದು ಹಾಕಿದ್ದಾರೆ ಎಂದು ದಯಾ ತಿಳಿಸಿದ್ದಾನೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಇರುವ ವಿಕಾಸ್ ದುಬೆ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಡಿಕ್ರು ಗ್ರಾಮದಲ್ಲಿ ಇದ್ದ ಆತನ ಮನೆಯನ್ನು ಶನಿವಾರ ಜಿಲ್ಲಾಡಳಿತ ಜೆಸಿಬಿ ತೆಗೆದುಕೊಂಡು ಹೋಗಿ ನೆಲಸಮ ಮಾಡಿ ಬಂದಿತ್ತು. ಜೊತೆಗೆ ಮನೆಯಲ್ಲಿ ಇದ್ದ ಐಷಾರಾಮಿ ಕಾರುಗಳನ್ನು ಕೂಡ ಜಖಂ ಮಾಡಲಾಗಿತ್ತು. ಈಗ ಆತನ ಹೆಸರನಲ್ಲಿದ್ದ ಕಾರ್ಖಾನೆಗಳನ್ನು ಕೂಡ ಜಿಲ್ಲಾಡಳಿತ ಕೆಡವಿ ಹಾಕಿದೆ.