ಪುಣೆ ಯುವತಿಯ ಡ್ಯಾನ್ಸ್ನ ಅಸಲಿ ಕಾರಣ ಬಹಿರಂಗ!

ಪುಣೆ: ಕೊರೊನಾ ಗೆದ್ದು ಬಂದ ಯುವತಿಯೊಬ್ಬರನ್ನು ಸ್ವಾಗತಿಸಲು ರಸ್ತೆಯಲ್ಲಿ ಕುಣಿದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸೆಲೆಬ್ರಿಟಿಗಳು ಸೇರಿದಂತೆ ಲಕ್ಷಾಂತರ ಮಂದಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಮೂಲಗಳ ಪ್ರಕಾರ ಕೊರೊನಾ ವೇಳೆ ಬಹಿಷ್ಕಾರ ಮಾಡಿದ ರೀತಿಯಲ್ಲಿ ವರ್ತಿಸಿದ ನೆರೆಹೊರೆಯವರ ಹೊಟ್ಟೆ ಉರಿಸಲು ಯುವತಿ ಈ ರೀತಿ ಡ್ಯಾನ್ಸ್ ಮಾಡಿದ್ದಳು ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ.
‘ತಾಯಿ ಕೊರೊನಾ ಗೆದ್ದು ಮನೆಗೆ ಬಂದಾಗ ಮಗಳು ಹೀಗೆ ಕುಣಿದು ಸ್ವಾಗತಿಸಿದ್ದಾಳೆ’ ಎಂಬ ಕ್ಯಾಪ್ಷನ್ ಜೊತೆಗೆ ಈ ವಿಡಿಯೋ ಹೆಚ್ಚ-ಹೆಚ್ಚು ಶೇರ್ ಆಗಿದೆ. ಆದರೆ ಕೊರೊನಾ ಗೆದ್ದು ಬಂದಿದ್ದು ಆಕೆಯ ತಾಯಿಯಲ್ಲ ಬದಲಿಗೆ ಹಿರಿಯ ಸಹೋದರಿ. ವಿಡಿಯೋದಲ್ಲಿ ಡಾನ್ಸ್ ಮಾಡುತ್ತಿರುವ ಯುವತಿಯ ಹೆಸರು ಸಲೋನಿ ಸಾಟ್ಪುಟೆ. 23 ವರ್ಷದ ಈ ಯುವತಿ ವಾಸಿಸುತ್ತಿರುವುದು ಪುಣೆಯಲ್ಲಿ. ಕೊರೊನಾ ವೈರಸ್ ಚಿಕಿತ್ಸೆ ಬಳಿಕ ಕೇರ್ಸೆಂಟರ್ನಿಂದ ವಾಪಸ್ ಬಂದ ಅಕ್ಕನನ್ನು ತಂಗಿ ಸಲೋನಿ ಹೀಗೆ ಡಾನ್ಸ್ ಮೂಲಕ ಸ್ವಾಗತಿಸಿದ್ದಾರೆ. ಆದರೆ ಹೀಗೆ ಡಾನ್ಸ್ ಮಾಡುವುದರ ಹಿಂದೆ ಇನ್ನೊಂದು ಉದ್ದೇಶವೂ ಇದೆ. ಸಲೋನಿ ಮನೆಯ ಮೂವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆಗ ಅವರ ಮನೆಯ ನೆರೆಹೊರೆಯವರು ಅವರನ್ನು ಬಹಿಷ್ಕಾರ ಮಾಡಿದಂತೆ ವರ್ತಿಸಿದ್ದರು. ಇದರಿಂದ ಸಿಟ್ಟಾಗಿದ್ದ ಸಲೋನಿ, ನೆರೆಹೊರೆಯವರಿಗೆ ‘ಉರಿಸಲು’ ಹೀಗೆ ನರ್ತಿಸಿದ್ದಳು ಎನ್ನಲಾಗಿದೆ. ಕುಟುಂಬದ ಎಲ್ಲರಿಗೂ ಕೊರೊನಾ ಆಗಿತ್ತು ಸಲೋನಿ ಅವರ ತಂದೆಯವರಿಗೆ ಮೊದಲು ಪಾಸಿಟಿವ್ ಆಯಿತು. ನಂತರ ತಾಯಿ, ಅಕ್ಕನಿಗೂ ಪಾಸಿಟಿವ್ ಆಯಿತು. ಸಲೋನಿ ಒಬ್ಬರೇ ಮನೆಯಲ್ಲಿರಬೇಕಾಯಿತಂತೆ ಆಗ ನೆರೆಹೊರೆಯವರು ಸಲೊನಿ ಜೊತೆಗೆ ಸರಿಯಾಗಿ ವರ್ತಿಸಲಿಲ್ಲವಂತೆ. ಜುಲೈ 17 ರಂದು ಚಿತ್ರೀಕರಿಸಿರುವ ವಿಡಿಯೋ ಸಲೋನಿ ಅವರ ಅಕ್ಕ ಜುಲೈ 17 ರಂದು ಕೊವಿಡ್ ಸೆಂಟರ್ನಿಂದ ಗುಣಮುಖರಾಗಿ ಮನೆಗೆ ಮರಳಿದರಂತೆ. ಅದೇ ದಿನ ವಿಡಿಯೋ ಚಿತ್ರೀಕರಣವಾಗಿದ್ದು, ಎರಡೇ ದಿನದಲ್ಲಿ ಭಾರಿ ವೈರಲ್ ಆಗಿಬಿಟ್ಟಿದೆ. ಇದೀಗ ಮತ್ತೊಂದು ವಿಡಿಯೋವನ್ನು ಸಲೋನಿ ಮಾಡಿದ್ದಾರೆ. ‘ಮನೆಯಲ್ಲಿ ಒಬ್ಬಳೇ ಇದ್ದು ಬಹಳ ನೋವು ಅನುಭವಿಸಿದೆ’ ಮತ್ತೊಂದು ವಿಡಿಯೋ ಮಾಡಿರುವ ಸಲೋನಿ, ನಾನು ಕುಣಿಯಬೇಕಾದರೆ ಮಾಸ್ಕ್ ಹಾಕಿರಲಿಲ್ಲ ಕ್ಷಮಿಸಿ. ಆದರೆ ಸತತವಾಗಿ ನಾನು ಒಬ್ಬಳೇ ಮನೆಯಲ್ಲಿದ್ದೆ, ನನ್ನ ಕುಟುಂಬವೆಲ್ಲಾ ಕೊರೊನಾಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿತ್ತು, ಮನೆಯವರೆಲ್ಲಾ ಒಮ್ಮೆ ಮನೆಗೆ ಬಂದರೆ ಸಾಕೆನಿಸಿತ್ತು, ನೆರೆಹೊರೆಯವರ ವರ್ತನೆಯೂ ನನಗೆ ಬೇಸರ ತರಿಸಿತ್ತು, ಹಾಗಾಗಿ ಅಕ್ಕ ಮನೆಗೆ ಬಂದ ಖುಷಿಯಲ್ಲಿ ನಾನು ಹಾಗೆ ಮಾಡಿದೆ ಎಂದು ಹೇಳಿದ್ದಾರೆ.