ಫಿಟ್ಸ್‌ನಿಂದ ಹೊರಳಾಡುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಕೊಣಾಜೆ ಪೊಲೀಸರಿಗೆ ವ್ಯಾಪಕ ಪ್ರಶಂಸೆ

ಮಂಗಳೂರು: ಫಿಟ್ಸ್ ಕಾಯಿಲೆಯಿಂದ ನೆಲದ ಮೇಲೆ ಹೊರಳಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಕೊಣಾಜೆ ಪೊಲೀಸ್ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಕೊಣಾಜೆಯ ಬೆಲ್ಮ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಇಂದು ನಡೆದಿದೆ.

ಕೊಣಾಜೆ ಪೊಲೀಸ್ ಠಾಣೆಯ ರೌಂಡ್ಸ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಜಗನ್ನಾಥ್ ಮತ್ತು ಲಕ್ಷ್ಮಣ ಮಾನವೀಯತೆ ಮೆರೆದವರು.

ಬೆಲ್ಮ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ಜೋಸೆಫ್ ಎಂಬವರು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರು. ಆದರೆ ಕೋವಿಡ್ ಭಯದಿಂದ ಯಾರೊಬ್ಬರೂ ಜೋಸೆಫ್ ನೆರವಿಗೆ ಧಾವಿಸಿರಲಿಲ್ಲ.

ಆಗ ಕೊಣಾಜೆ ಪೊಲೀಸ್ ಠಾಣೆಯ ಜಗನ್ನಾಥ್ ಮತ್ತು ಲಕ್ಷ್ಮಣ ರವರು ಧಾವಿಸಿ ಕೋವಿಡ್ ಭಯವನ್ನೂ ಲೆಕ್ಕಿಸದೆ ಜೋಸೆಫ್ ರವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ಪರಿಣಾಮ ಅವರು ಚೇತರಿಸಿಕೊಂಡಿದ್ದಾರೆ.

ಈ ವೇಳೆ ನೆರವಿಗೆ ಧಾವಿಸಿದ ಅಲ್ಲಿ ಸೇರಿದ್ದ ಶಾರುಕ್, ಗಣೇಶ್ ಮುಂತಾದವರು ಸೇರಿ ಅವರನ್ನು ಉಪಚರಿಸಿದರು.

ಈ ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯೇ ಚಿಕಿತ್ಸೆಗೆ ಹಿಂದೇಟು ಹಾಕುತ್ತಿರುವ ಸಮಯದಲ್ಲಿ ಸೂಕ್ತ ಸಮಯದಲ್ಲಿ ಅಲ್ಲಿಗೆ ಧಾವಿಸಿ ಜೋಸೆಫ್ ರವರ ಜೀವವನ್ನು ಉಳಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ.

Leave a Reply

Your email address will not be published. Required fields are marked *