ಪಾನೀರ್: ಕೌಟುಂಬಿಕ ಕಲಹದಿಂದ ನೊಂದು ಯುವಕ ಆತ್ಮಹತ್ಯೆ

ಉಳ್ಳಾಲ: ಪೊಲೀಸ್ ಠಾಣಾ ವ್ಯಾಪ್ತಿಯ ಪಾನೀರ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಯುವಕನೊಬ್ಬ ಕೌಟುಂಬಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಘಟನೆ ವಿವರ: ಬೆಳ್ಮ ಗ್ರಾಮದ ರೆಂಜಾಡಿ ನಿವಾಸಿ ಮಲಿಕ್ (21) ಎಂಬಾತ ಮುಡಿಪು ಮೂಲದ ಯುವತಿಯನ್ನು ಪ್ರೀತಿಸಿ ವಿವಾಹ ಆಗಿದ್ದನು. ವಿವಾಹ ಆದ ಬಳಿಕ ಮಲಿಕ್ ತನ್ನ ಮನೆಯಿಂದ ಹೊರಬಂದು ಪಾನೀರ್ ನಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ವಾಸವಾಗಿದ್ದನು. ಮಲಿಕ್ ಗೆ ದುಡಿಯಲೆಂದು ಯುವತಿ ಯ ತಂದೆ ಅಟೋ ರಿಕ್ಷಾ ಖರೀದಿಸಿ ಕೊಟ್ಟಿದ್ದರು. ವಿವಾಹ ಆದ ಬಳಿಕ ಮಲಿಕ್ ಕುಟುಂಬದಲ್ಲಿ ಹಲವು ಬಾರಿ ಕೌಟುಂಬಿಕ ಕಲಹಗಳು ನಡೆದಿದ್ದು ಈ ವಿಚಾರವನ್ನು ಮಲಿಕ್ ನ ಪತ್ನಿ ತನ್ನ ತಂದೆಗೆ ತಿಳಿಸಿ ನೋವನ್ನು ತೋಡಿಕೊಂಡಿದ್ದಳು. ಅದರ ಬಳಿಕ ಅವರಿಬ್ಬರ ನಡುವಿನ ಕೌಟುಂಬಿಕ ಸಮಸ್ಯೆಯನ್ನು ಹಿರಿಯರು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ್ದರು.
ಕಳೆದ ಎರಡು ದಿನಗಳಿಂದ ಆತ ಆಟೋ ರಿಕ್ಷಾದಲ್ಲಿ ದುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಕೂಡಾ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜತೆ ಜಗಳ ಮಾಡಿದ್ದಾನೆ ಎನ್ನಲಾಗಿದ್ದು ಅದೇ ಕಾರಣದಿಂದ ನೊಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *