ನೇತ್ರಾವತಿ ಸೇತುವೆ ಮೇಲೆ ಕೊಡೆಯಿಟ್ಟು ನದಿಗೆ ಹಾರಿದ್ದ ವ್ಯಕ್ತಿಯ ಶವ ಪತ್ತೆ

ಮಂಗಳೂರು: ಕೆಲವು ದಿನಗಳ ಹಿಂದೆ ನೇತ್ರಾವತಿ ಸೇತುವೆ ಮೇಲೆ ಕೊಡೆಯಿಟ್ಟು ನದಿಗೆ ಹಾರಿದ್ದ ಹರೇಕಳ ಕೊಲ್ಕೆ ಶಾಲೆ ಬಳಿಯ ನಿವಾಸಿ ಕಿಶೋರ್ ಅಡ್ಯಂತಾಯ(36) ಮೃತದೇಹ ಜೆಪ್ಪು ಪಟ್ಲ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ತಂದೆಯೊಂದಿಗೆ ವಾಸವಿದ್ದ ಕಿಶೋರ್ ಒಂದು ವಾರದಿಂದ ನಾಪತ್ತೆಯಾಗಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಬಳಿಕ ನಾಪತ್ತೆ ದೂರು ದಾಖಲಾಗಿತ್ತು. ಆತ್ಮಹತ್ಯೆ ತಡೆಗೆ ಸೇತುವೆಗೆ ಬೇಲಿ ಹಾಕುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಶಿಲನ್ಯಾಸ ನೆರವೇರಿಸಿದ ದಿನ ಸೇತುವೆ ಮೇಲೆ ಕೊಡೆ ಪತ್ತೆಯಾಗಿತ್ತು. ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಸಿಬ್ಬಂದಿಯಿಲ್ಲ ಎಂಬ ಕಾರಣ ಕೊಟ್ಟು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ.
